ಜಗತ್ತನ್ನು ಬೆಚ್ಚಿ ಬೀಳಿಸುತ್ತಿರುವ ಇಸ್ಲಾಮಿಕ್ ಉಗ್ರ ಸಂಘಟನೆಗೆ ಐಸಿಸ್ ಸೇರಲು ಸಿರಿಯಾಗೆ ಹೊರಟ್ಟಿದ್ದ ಎನ್ನಲಾಗುತ್ತಿರುವ ಕರ್ನಾಟಕದ ಕರಾವಳಿ ತಾಲ್ಲೂಕು ಭಟ್ಕಳ ಮೂಲದ ರೌಫ್ ಅಹಮ್ಮದ್ ಎಂಬ ಶಂಕಿತ ಭಯೋತ್ಪಾದಕನನ್ನು ಎನ್ಐಎ ಅಧಿಕಾರಿಗಳು ಪುಣೆ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಬಂಧಿಸಿದ್ದಾರೆ. ಆತ ಐಸಿಸ್ ರಿಕ್ರುಟರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಸಹ ಲಭಿಸಿದೆ. ಈ ಬಂಧನ ಮಿನಿ ದುಬೈ ಎಂದು ಕರೆಸಿಕೊಳ್ಳುವ ಭಟ್ಕಳ ಉಗ್ರರ ಅಡ್ಡೆಯಾಗುತ್ತಿದೆಯಾ ಎಂಬ ಆತಂಕವನ್ನು ಬಲ ಪಡಿಸಿದೆ. ಭಟ್ಕಳ ನಗರದಲ್ಲಿ ಇನ್ನೂ ಬಹಳಷ್ಟು ಶಂಕಿತ ಉಗ್ರರಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ದುಬೈ ಮೂಲಕ ಸಿರಿಯಾಗೆ ತೆರಳುವ ಯೋಜನೆ ರೂಪಿಸಿದ್ದ ಆತ ಇನ್ನು ಕೆಲವೇ ಕ್ಷಣಗಳಲ್ಲಿ ದುಬೈಗೆ ಹಾರುವವನಿದ್ದ. ಈತ ಸಿರಿಯಾ ಐಸಿಸ್ ಉಗ್ರರ ಜೊತೆ ಇಂಟರ್ನೆಟ್ ಚಾಟಿಂಗ್ ನಡೆಸುತ್ತಿದ್ದ. ಅಲ್ಲದೇ ಐಸಿಸ್ ಸಂಘಟನೆಗೆ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದ ಎನ್ನಲಾಗಿದೆ.
ಶಂಕಿತ ಉಗ್ರನನ್ನು ಇಸ್ಮಾಯಿಲ್ ಅಬ್ದುಲ್ ರೌಫ್ (34) ಭಟ್ಕಳದ ನವಾಯತ್ ಕಾಲೋನಿಯ ವಾಸಿ ಎನ್ನಲಾಗುತ್ತಿದ್ದು, ಕಳೆದ 2 ದಿನಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವಾಲಯದಿಂದ ಈತನ ವಿರುದ್ಧ ಲುಕ್ ಔಟ್ ನೊಟೀಸ್ ಕೂಡ ಜಾರಿಯಾಗಿತ್ತು.
ಐಸಿಸ್‌ಗಾಗಿ ಯುವಕರ ನೇಮಕಾತಿ ಮಾಡುತ್ತಿದ್ದ ಮತ್ತು ಐಸಿಸ್ ಸಮರ್ಥನೆ ಆರೋಪದ ಮೇಲೆ ಎನ್ಐಎ ಈ ವರ್ಷದಾರಂಭದಿಂದ ಒಟ್ಟು 25 ಜನರನ್ನು ಬಂಧಿಸಿದೆ. ಹೆಚ್ಚಿನವರು ಕರ್ನಾಟಕದವರಾಗಿದ್ದು, ಅದರಲ್ಲಿ ರೌಫ್ 9ನೆಯವನಾಗಿದ್ದಾನೆ. ಇದು ಆಂತರಿಕ ಭದ್ರತೆಯ ಗಂಭೀರ ಲೋಪವನ್ನು ಎತ್ತಿ ತೋರಿಸಿದೆ.
ಬಹಳ ದಿನಗಳಿಂದ ರೌಫ್ ಮೇಲೆ ಭದ್ರತಾ ಪಡೆ ಹದ್ದಿನ ಕಣ್ಣಿಟ್ಟಿತ್ತು ಎಂದು ಮೂಲಗಳು ತಿಳಿಸಿವೆ.
ಭಟ್ಕಳ್ ಪೊಲೀಸರು ಆತನ ಮನೆಗೆ ಹೋಗಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.