ಭಾರತೀಯ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಪುರಾಣ ಪ್ರಸಿದ್ಧ ತಿರುಪತಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರೀ ವೆಂಕಟೇಶ್ವರ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.
ಶ್ರೀವೆಂಕಟೇಶ್ವರ್ ಯುನಿವರ್ಸಿಟಿಯ ತಾರಕರಾಮ ಕ್ರೀಡಾಂಗಣದಲ್ಲಿ 104ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಮೋದಿ, ವಿಜ್ಞಾನವು ನಮ್ಮ ಜನರ ಹೆಚ್ಚುತ್ತಿರುವ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಗಬೇಕು. ವಿಜ್ಞಾನದ ಬೆಳವಣಿಗೆಗೆ ಸರ್ವ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಬಳಿಕ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿದ ಪ್ರಧಾನಿ ಪೂಜೆ-ಪ್ರಾರ್ಥನೆ ಸಲ್ಲಿಸಿ ಹಿಂತಿರುಗಿದ್ದಾರೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರು ಅವರಿಗೆ ಸಾಥ್ ನೀಡಿದ್ದರು.
ಅಮೆರಿಕ, ಜಪಾನ್, ಇಸ್ರೇಲ್, ಫ್ರಾನ್ಸ್ ಮತ್ತು ಬಾಂಗ್ಲಾದೇಶಗಳಿಂದ ಆರು ನೊಬೆಲ್ ಪ್ರಶಸ್ತಿ ವಿಜೇತರು, ದೇಶದ ಮೂಲೆ ಮೂಲೆಗಳಿಂದ 14,000 ವಿಜ್ಞಾನಿಗಳು ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ದೇವಾಲಯದ ಪರವಾಗಿ ಈ ಸಂದರ್ಭದಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ಭಾವಚಿತ್ರಗಳನ್ನು ಪ್ರಧಾನಿಗೆ ನೀಡಲಾಯಿತು.