ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಸಿಬಿಐಗೆ ವಹಿಸಿದೆ.
ಅನುರಾಗ್ ತಿವಾರಿ ಅವರ ತಾಯಿ ಸುಶೀಲಾ ಭಾಯಿ ಹಾಗೂ ಸಹೋದರ ಮಯಾಂಕ್ ಮತ್ತಿತರರು ಸಿಎಂ ಕಚೇರಿಗೆ ತೆರಳಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅನುರಾಗ್ ತಿವಾರಿ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಸಿಎಂಗೆ ಮನವಿ ಮಾಡಿದ್ದರು. ಅಲ್ಲದೇ, ಸಹೋದರ ಮಯಾಂಕ್, ಅನುರಾಗ್ ಅವರದ್ದು ಸಹಜ ಸಾವಲ್ಲ, ಇದೊಂದು ಕೊಲೆ ಎಂದು ಹಜರತ್‌ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಿದೆ. ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗುತ್ತೆ ಎಂದು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಗೃಹ ಕಾರ್ಯದರ್ಶಿ ಅರವಿಂದ್ ಕುಮಾರ್ ಘೋಷಿಸಿದ್ದಾರೆ.
ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಪೊಲೀಸರ ವಿಶೇಷ ತಂಡವೊಂದು ತನಿಖೆಗಾಗಿ ಬೆಂಗಳೂರಿಗೆ ಶೀಘ್ರವೇ ಬರಲಿದೆ. ಕುಟುಂಬ ಸದಸ್ಯರು ಮಾಡುತ್ತಿರುವ ಆರೋಪಗಳ ಬಗ್ಗೆ ಅವರು ತನಿಖೆ ನಡೆಸಲಿದ್ದಾರೆ. ಅನುರಾಗ್ ಅವರ ಮೇಲಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.