ಭಾರತೀಯ ಸೇನೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ದೇಶಾದ್ಯಂತ ಖಡನೆಗೆ ಗುರಿಯಾಗಿರುವ ಬಾಲಿವುಡ್ ಹಿರಿಯ ನಟ ಓಂಪುರಿ ತಾವು ಮಾಡಿರುವ ಅಚಾತುರ್ಯಕ್ಕೆ ಕ್ಷಮೆಯಾಚಿಸಿದ್ದಾರೆ.
ಅವರ ವಿರುದ್ಧ ಪೊಲೀಸ್ ದೂರು ದಾಖಲಾದ ಬಳಿಕ ವರದಿಗಾರರೊಂದಿಗೆ ಮಾತನ್ನಾಡುತ್ತ ಓಂ ಪುರಿ, ಅಂತಹ ಹೇಳಿಕೆ ನೀಡಿದ್ದಕ್ಕೆ ನಿಜಕ್ಕೂ ನಾಚಿಕೆಯಾಗುತ್ತಿದೆ. ನನಗೆ ಕ್ಷಮೆ ಅಲ್ಲ. ಶಿಕ್ಷೆಯಾಗಬೇಕು. ಮೊದಲನೆಯದಾಗಿ ನಾನು ಆತನ ( ಉರಿ ದಾಳಿ ಹುತಾತ್ಮ) ಕುಟುಂಬದ ಬಳಿ ಕ್ಷಮೆಯಾಚಿಸುತ್ತೇನೆ. ಅವರು ನನ್ನನ್ನು ಕ್ಷಮಿಸಿದರೆ ಬಳಿಕ ಸಂಪೂರ್ಣ ದೇಶದ ಕ್ಷಮೆ ಕೇಳುತ್ತೇನೆ. ಬಾಯಿಗೆ ಬಂದದ್ದನ್ನು ಹೇಳಿದ ಬಳಿಕ ಕ್ಷಮೆಯಾಚಿಸಿದ ಕೂಡಲೇ ಎಲ್ಲವೂ ಸರಿಯಾಗುತ್ತದೆ ಎಂಬುದು ಸಮರ್ಥನೀಯವಲ್ಲ ಎಂದು ಅವರು ಹೇಳಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿ ಪಾಕಿಸ್ತಾನದ ಕಲಾವಿದರಿಗೆ ಅವಕಾಶ ಕೊಡಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿರಿಯ ನಟ ಓಂಪುರಿಗೆ ಅವಕಾಶ ನೀಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ನಟ ನೀಡಿದ ಹೇಳಿಕೆ ಇದೀಗ ದೇಶಾದ್ಯಂತ ಕೋಲಾಹಲವನ್ನೆಬ್ಬಿಸಿದೆ.
65 ವರ್ಷ ವಯಸ್ಸಿನ ಹಿರಿಯ ನಟ ಓಂಪುರಿ, ದೇಶದ ರಕ್ಷಣೆಯಲ್ಲಿ ತೊಡಗಿರುವ ನಮ್ಮ ಸೈನಿಕರ ಬಗ್ಗೆ ಅಗೌರವ ತೋರಿದ್ದಲ್ಲದೇ ಅವರಿಗೆ ಸೇನೆ ಸೇರಿ ಎಂದು ನಾವು ಯಾರು ಒತ್ತಾಯ ಮಾಡಿರಲಿಲ್ಲ ಎನ್ನುವ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ.
ಹುತಾತ್ಮರಾದ ಸೈನಿಕರಿಗೆ ಸೇನೆ ಸೇರಲಿ ಎಂದು ಕೋರಿದವರಾರು? ಶಸ್ತ್ರಾಸ್ತ್ರಗಳನ್ನು ಎತ್ತಿಕೊಳ್ಳುವಂತೆ ಹೇಳಿದವರಾರು? ಭಾರತ ಮತ್ತು ಪಾಕಿಸ್ತಾನದ ನಡುವಿನ ಶತ್ರುತ್ವ ಇಸ್ರೇಲ್ ಮತ್ತು ಪ್ಯಾಲಿಸ್ತೇನ್‌ನಂತಾಗಬೇಕೆ? ನೂರಾರು ವರ್ಷಗಳ ಕಾಲ ಹೋರಾಟ ಮಾಡುತ್ತಲೇ ಇರಬೇಕೇ? ಪಾಕಿಸ್ತಾನವನ್ನು ಯುದ್ಧಕ್ಕೆ ಪ್ರಚೋದಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಭಾರತದಲ್ಲಿರುವ ಅನೇಕ ಮುಸ್ಲಿಂ ಸಮುದಾಯದ ಬಾಂಧವರು ಸಂಬಂಧಿಕರು ಪಾಕಿಸ್ತಾನದಲ್ಲಿದ್ದಾರೆ. ನೆರೆಯ ರಾಷ್ಟ್ರವಾದ ಭಾರತದೊಂದಿಗೆ ಪಾಕಿಸ್ತಾನ ಅದು ಹೇಗೆ ಯುದ್ಧ ಮಾಡುತ್ತದೆ ಎಂದು ಅವರು ಹೇಳಿದ್ದರು.
ಅವರ ಈ ಅಸಂಬದ್ಧ ಹೇಳಿಕೆ ಭಾರತೀಯ ಸೈನಿಕರಿಗೆ ಅಪಮಾನವನ್ನುಂಟು ಮಾಡಿದೆ ಎಂದು 65 ವರ್ಷದ ಹಿರಿಯ ನಟನ ವಿರುದ್ಧ ವಕೀಲರೊಬ್ಬರು ಗುರುವಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.