ಬಿಜೆಪಿ ಮಾಜಿ ಸಂಸದ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಹುದಿನಗಳ ನಿರೀಕ್ಷೆಗೆ ತೆರೆ ಎಳೆದಿದ್ದಾರೆ.
ನವದೆಹಲಯಲ್ಲಿನ ಕಾಂಗ್ರೆಸ್ ಮುಖ್ಯ ಕಾರ್ಯಾಲಯದಲ್ಲಿ ಪಕ್ಷ ಸೇರಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಅವರು, ನಾನು ಹುಟ್ಟಾ ಕಾಂಗ್ರೆಸ್ಸಿಗ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನನ್ನ ತಂದೆ ಕಾಂಗ್ರೆಸ್ಸಿಗರಾಗಿದ್ದರು, ಕಾಂಗ್ರೆಸ್‌ಗೆ ವಾಪಸ್ಸಾಗಿರುವುದು ನನ್ನ ಘರ್ ವಾಪ್ಸಿ ಅಷ್ಟೇ, ಎಂದಿದ್ದಾರೆ.
ಕಾಂಗ್ರೆಸ್ ನನ್ನ ತಾಯಿ. ನಾನೀಗ ತಾಯಿ ಮಡಿಲಿಗೆ ಮರಳಿದ್ದೇನೆ. ನನ್ನ ಮೊದಲ ಇನ್ನಿಂಗ್ಸ್ ಈಗ ಪ್ರಾರಂಭವಾಗಿದೆ. ಇನ್ಮುಂದೆ ನನ್ನ ಜೀವ 'ಕೈ'ಗೆ ಮುಡಿಪು ಎಂದಿದ್ದಾರೆ.
ಪಂಜಾಬ್‌ನಲ್ಲಿ ಡ್ರಗ್ ದಂಧೆ ಬೆಳೆದಿರುವುದು ವಾಸ್ತವ ಸಂಗತಿ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಇದಕ್ಕೆ ಆಡಳಿತಾರೂಢ ಅಕಾಲಿ ದಳವೇ ನೇರ ಹೊಣೆ ಎಂದು ಸಿಧು ಆರೋಪಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿನ ವರಿಷ್ಠರ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಸಿಧು ಮತ್ತು ಅವರ ಪತ್ನಿ ಬಿಜೆಪಿಯನ್ನು ತ್ಯಜಿಸಿದ್ದರು.
2004 ಮತ್ತು 2014 ನಡುವೆ ಲೋಕಸಭೆಯಲ್ಲಿ ಅಮೃತಸರವನ್ನು ಪ್ರತಿನಿಧಿಸಿದ್ದ ಸಿಧು, ಬಿಜೆಪಿ ತಮ್ಮನ್ನು ಪಂಜಾಬ್‌ನಿಂದ ಹೊರಗಿಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದರು. ಜತೆಗೆ ತಮ್ಮನ್ನು 'ಅಲಂಕಾರಿಕ ಕೃತಿ'ಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು.
ಬಿಜೆಪಿ ತ್ಯಜಿಸಿದ ಬಳಿಕ ಕೇಜ್ರಿವಾಲ್ ನೇತೃತ್ವದ ಆಪ್ ಸೇರಲೆತ್ನಿಸಿದ್ದ ಅವರು, ಬಳಿಕ ‘ಆವಾಜ್ ಇ ಪಂಜಾಬ್’ ಪಕ್ಷವನ್ನು ಸ್ಥಾಪಿಸಿದ್ದರು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಮುಂದಿನ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸಿಧು ನೇತೃತ್ವದ ‘ಆವಾಜ್ ಇ ಪಂಜಾಬ್’ ಸ್ಪರ್ಧಿಸಬೇಕಿತ್ತು. ಆದರೆ, ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದರೆ, ಆಡಳಿತ ವಿರೋಧಿ ಮತಗಳನ್ನು ವಿಭಜಿಸಿದಂತಾಗುತ್ತದೆ ಎಂಬ ಕಾರಣ ನೀಡಿರುವ ಸಿಧು, ಚುನಾವಣೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದರು.
ಬಳಿಕ ಕಾಂಗ್ರೆಸ್ ಸೇರುವ ಇಂಗಿತವನ್ನು ವ್ಯಕ್ತ ಪಡಿಸಿದ್ದ ಸಿಧು ಪತ್ನಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ