ಹೈದರಾಬಾದ್: ಇನ್ ಸ್ಟಾಗ್ರಾಮ್ ನಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಸಿ.ಮೌನಿಕಾ(21) ಆತ್ಮಹತ್ಯೆಗೆ ಶರಣಾದ ಯುವತಿ. ಮೌನಿಕಾ ಬಿಟೆಕ್ ಫೈನಲ್ ಇಯರ್ ವಿದ್ಯಾರ್ಥಿಯಾಗಿದ್ದಳು. ನಿತ್ಯವೂ ತನ್ನ ತಾಯಿ ಮನಸೋ ಇಚ್ಛೆ ನಿಂದಿಸುತ್ತಿದ್ದಳು ಎಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
`ಇತ್ತೀಚಿನ ದಿನಗಳಲ್ಲಿ ನಾನು ಸಂತೋಷವಾಗಿರಲು ಹೆದರುತ್ತೇನೆ. ನನ್ನ ಜೀವನದಲ್ಲಿ ನಾನು ಸಂತೋಷವಾಗಿರುವುದನ್ನು ಕೆಲವರು ಸಹಿಸಿಕೊಳ್ಳುತ್ತಿಲ್ಲ. ನನ್ನ ಜೀವನದಲ್ಲಿ ಪ್ರತಿಕ್ಷಣವೂ ಕೆಟ್ಟದಾಗಿತ್ತು. ನಾನು ಈಗ ಆ ಎಲ್ಲದರ ಮೂಲಕ ಹೊರಬರುತ್ತಿದ್ದೇನೆ. ನನ್ನ ಜೀವನದಲ್ಲಿ ಎಲ್ಲದರಿಂದಲ್ಲೂ ಪಾಠ ಕಲಿತಿದ್ದೇನೆ. ಇನ್ನು ಸಹಿಸಲಾರೆ. ಇಲ್ಲಿಗೆ ನನ್ನ ಬದುಕು ಕೊನೆಗೊಳಿಸುತ್ತಿದ್ದೇನೆ' ಎಂದು ಇನ್ ಸ್ಟಾಗ್ರಾಮ್ ನಲ್ಲಿ ಡೆತ್ ನೋಟ್ ಹಾಕಿರುವ ಮೌನಿಕಾ ನೇಣಿಗೆ ಶರಣಾಗಿದ್ದಾಳೆ.
ಮತ್ತೊಂದು ಪ್ರಕರಣದಲ್ಲಿ ಶಾಹಿದ್ ಹುಸೇನ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಕೆಲ ಸಂಬಂಧಿಗಳು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದು ನಂತರ ಸಾವಿಗೆ ಶರಣಾಗಿದ್ದಾನೆ.
ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.