ನವದೆಹಲಿ: ರಿಯಾನ್ ಇಂಟರ್ನಾಷನಲ್ ಶಾಲೆ ವಿದ್ಯಾರ್ಥಿ 7 ವರ್ಷದ ಬಾಲಕ ಪ್ರದ್ಯುಮ್ನ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೊಲೆ ಆರೋಪದಲ್ಲಿ ಬಂಧಿತನಾದ 11 ನೇ ತರಗತಿ ವಿದ್ಯಾರ್ಥಿ ಕೊಲೆ ಮಾಡಿರುವುದಾಗಿ ಸಿಬಿಐ ತಂಡದ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಹರ್ಯಾಣ ಪೊಲೀಸರು ಈ ಘಟನೆಯಲ್ಲಿ ಬಸ್ ಕಂಡಕ್ಟ್ ಆರೋಪಿ ಎಂದು ಆತನನ್ನು ಬಂಧಿಸಿದ್ದರು. ಆದರೆ ಸಿಬಿಐ ತನಿಖೆ ಕೈಗೆತ್ತಿಕೊಂಡ ಬಳಿಕ 11 ನೇ ತರಗತಿ ವಿದ್ಯಾರ್ಥಿಯೇ ಕೊಲೆ ಮಾಡಿದಾತ ಎಂದು ತಿಳಿದುಬಂದಿತ್ತು.
ಪರೀಕ್ಷೆ ಮುಂದೊಡ್ಡುವ ನೆಪದಲ್ಲಿ 7 ವರ್ಷದ ಬಾಲಕ ಪ್ರದ್ಯುಮ್ನನ್ನು ಆತ ಕೊಲೆ ಮಾಡಿದ್ದ ಎಂದು ಹೇಳಲಾಗಿದೆ. ತನ್ನ ತಂದೆ ಮತ್ತು ಸ್ವತಂತ್ರ ಸಾಕ್ಷಿದಾರರ ಸಮ್ಮುಖದಲ್ಲಿ ಸಿಬಿಐ ತಂಡದ ಎದುರು ಆತ ಈ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಕೊಲೆ ಬಗ್ಗೆ ವಿವರಿಸಿದ್ದಾನೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಸೋಹ್ನಾ ಮಾರ್ಕೆಟ್ ನಿಂದ ಕೊಲೆ ಮಾಡಲು ಚಾಕು ಖರೀದಿಸಿದ್ದ. ನಂತರ ಶಾಲೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಪ್ರದ್ಯುಮ್ನನ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಎನ್ನಲಾಗಿದೆ. ಸಿಸಿಟಿವಿ ಫೂಟೇಜ್ ಮತ್ತು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ವಿಚಾರಣೆ ಆಧರಿಸಿ ಸಿಬಿಐ ತನಿಖೆ ನಡೆಸಿತ್ತು. ಇದೀಗ ಆರೋಪಿ ತಪ್ಪೊಪ್ಪಿಕೊಂಡಿದ್ದು, ಆತನಿಗೆ ಜೀವಾವಧಿ ಶಿಕ್ಷೆ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರದ್ಯುಮ್ನ ಪರ ವಕೀಲರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ