ನವದೆಹಲಿ : ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ಕೋರ್ಟ್ ಮುಂದೆ ಮೊದಲ ಬಾರಿ ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸ್ ಕಸ್ಟಡಿ ವಿಸ್ತರಣೆ ವೇಳೆ ಹತ್ಯೆ ಮಾಡಿರುವುದಾಗಿ ಕೋರ್ಟ್ನಲ್ಲಿ ಹೇಳಿಕೆ ದಾಖಲಿಸಿದ್ದಾನೆ. ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನಲೆ ಕಸ್ಟಡಿಗಾಗಿ ಸಾಕೇತ್ ಜಿಲ್ಲಾ ನ್ಯಾಯಲಯದ ಮುಂದೆ ಅಫ್ತಾಬ್ ನನ್ನು ಹಾಜರುಪಡಿಸಲಾಗಿತ್ತು.
ಈ ವೇಳೆ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡ ಅಫ್ತಾಬ್ ಜಗಳದ ಆವೇಶದಲ್ಲಿ ಹತ್ಯೆ ಮಾಡಿದ್ದೇನೆ, ಹತ್ಯೆಯ ಮಾಡಿರುವುದಕ್ಕೆ ಪಶ್ಚಾತ್ತಾಪ ಇದೆ, ಘಟನೆಯನ್ನು ನೆನಪಿಸಿಕೊಳ್ಳಲು ಬೇಸರವಿದೆ ಎಂದು ಹೇಳಿಕೊಂಡಿದ್ದಾನೆ.
ಅಫ್ತಾಬ್ ಹೇಳಿಕೆ ಬಳಿಕ ಪೊಲೀಸರು ಕಸ್ಟಡಿ ವಿಸ್ತರಣೆಗೆ ಮನವಿ ಮಾಡಿದರು. ಅಫ್ತಾಬ್ ಹೇಳಿಕೆ ಆಧರಿಸಿ ತನಿಖೆ ಮಾಡಬೇಕಿದೆ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ತನಿಖೆ ನಡೆಸಬೇಕಿದೆ.
ಈ ಹಿನ್ನಲೆ ಅವಧಿ ವಿಸ್ತರಣೆ ಮಾಡಬೇಕು ಎಂದು ದೆಹಲಿ ಪೊಲೀಸರ ಪರ ವಕೀಲರು ಮನವಿ ಮಾಡಿದರು. ಮನವಿಗೆ ಸ್ಪಂಧಿಸಿದ ಕೋರ್ಟ್ ನಾಲ್ಕು ದಿನಕ್ಕೆ ಕಸ್ಟಡಿಯನ್ನು ವಿಸ್ತರಿಸಿ ಆದೇಶ ನೀಡಿದೆ.