ಪೊಲೀಸ್ ವಾಹನದಿಂದ ಕೈದಿಯೋರ್ವನನ್ನು ಹೊರಗೆಳೆದು ಕೊಚ್ಚಿ ಹಾಕಿದ ಬೆಚ್ಚಿಬೀಳಿಸುವ ಘಟನೆ ತಮಿಳುನಾಡಿನ ತಿರುವಣ್ವೇಲಿಯಲ್ಲಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸಪೆಕ್ಟರ್ ಮತ್ತು ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ.
ಮೊರಪನಡು ಗ್ರಾಮದಲ್ಲಿ ಬಾಂಬ್ ಎಸೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಲಸುಬ್ರಮಣಿಯನ್ ಅಲಿಯಾಸ್ ಸಿನಗ್ರಾವೆಲ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ 13 ಜನರಿದ್ದ ದುಷ್ಕರ್ಮಿಗಳ ಗುಂಪೊಂದು ವಾಹನವನ್ನು ತಡೆದಿದೆ. ಬಳಿಕ ಮೆಣಸಿನ ಪುಡಿ ಮಿಶ್ರಿತ ನೀರನ್ನು ಪೊಲೀಸರ ಮುಖಕ್ಕೆ ಎರಚಿ ಕೈದಿಯನ್ನು ಹೊರಗೆಳೆದು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದಾರೆ. ಬಳಿಕ ಕಾರ್ ಮತ್ತು ಬೈಕ್‌ಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.
ಕೃತ್ಯ ನಡೆದ ಸ್ಥಳದ ಹತ್ತಿರದಲ್ಲಿರುವ ಹೊಟೆಲೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು ಆರೋಪಿಗಳ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ.
ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.