ಇದು ಬೇಲಿಯೇ ಎದ್ದು ಹೊಲ ಮೇಯ್ದ ಆಘಾತಕಾರಿ ಕತೆ. ಮುಖ್ಯಪೇದೆಯೋರ್ವ ಕಳ್ಳರಿಗೆ ಪಿಕ್ ಪಾಕೆಟ್ ಮಾಡಲು ಸಹಾಯ ಮಾಡುತ್ತಿರುವ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು ದೆಹಲಿ ಪೊಲೀಸ್ ಇಲಾಖೆಗೆ ಬಹುದೊಡ್ಡ ಮುಜುಗರವನ್ನುಂಟುಮಾಡಿದೆ. ಚಾವ್ಡಿ ಬಜಾರ್ ಮೆಟ್ರೋ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಚಾವ್ಡಿ ಬಜಾರ್ ಮೆಟ್ರೋ ನಿಲ್ದಾಣದಲ್ಲಿ ಮಹಿಳಾ ಪಿಕ್ ಪಾಕೆಟ್ ಗ್ಯಾಂಗ್ ಕಡೆಯಿಂದ ಗುರುತಿಸಲ್ಪಡದ ವಸ್ತುವೊಂದನ್ನು ಪಡೆಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಮುಖ್ಯ ಪೇದೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಸೆರೆಯಾಗಿದ್ದು ಹೇಗೆ: ತಾವು ಮೆಟ್ರೋದಲ್ಲಿ ಗುರ್ಗಾಂವ ಕಡೆ ಪ್ರಯಾಣ ಬೆಳೆಸುವಾಗ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದಿಯಲಾಗಿದೆ ಎಂದು ಅಮೇರಿಕನ್ ಮೂಲಕ ಮಹಿಳೆಯೋರ್ವಳು ದೂರು ನೀಡಿದ್ದಳು. ಈ ದೂರಿನ ತನಿಖೆ ನಡೆಸಿದ ಪೊಲೀಸರು ಆ ಕಳ್ಳಿಯರನ್ನು ಬಂಧಿಸಿದ್ದಾರೆ. ದೂರು ನೀಡಿದ ಮಹಿಳೆ ರೈಲಿನಲ್ಲಿ ತನ್ನ ಪತಿಯ ಜತೆ ತೆಗೆದುಕೊಂಡ ಸೆಲ್ಫಿಯಲ್ಲಿ ಈ ಕಳ್ಳಿಯರು ಕೂಡ ಸೆರೆಯಾಗಿದ್ದರು.
ಆ ಸೆಲ್ಫಿಯಲ್ಲಿ ದಂಪತಿ ಸುತ್ತ ಇಬ್ಬರು ಮಹಿಳೆಯರಿರುವುದು ಕಂಡು ಬಂದಿತ್ತು. ಬಳಿಕ ಆ ರೂಟ್ನ ಸಿಸಿ ಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ಕಳ್ಳಿಯರ ಗ್ಯಾಂಗ್ನಲ್ಲಿ 6 ಜನರಿದ್ದುದು ಪತ್ತೆಯಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಂದೇ ಕಳ್ಳಿಯರನ್ನು ಬಂಧಿಸಿ ಯುಎಸ್ ಮಹಿಳೆ ಕಳೆದುಕೊಂಡಿದ್ದ ವಸ್ತು, ನಗದನ್ನು ಹಿಂತಿರುಗಿಸಿದರು. ಈ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಎಲ್ಲ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಪೊಲೀಸ್ ಪೇದೆಯ ಅಕ್ರಮ ಚಟುವಟಿಕೆ ಬಯಲಾಗಿದೆ.
ಬಂಧಿತ ಕಳ್ಳಿಯರಿಂದ ಒಟ್ಟು 22 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.