ಹರ್ಯಾಣ: ಈ ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ವಂಚಿತರಾಗಿದ್ದ ಕುಸ್ತಿಪಟು ವಿನೇಶ್ ಫೋಗಟ್ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದರು. ಅವರ ಕತೆ ಏನಾಗಿದೆ ನೋಡಿ.
ಕುಸ್ತಿ ಫೆಡರೇಶನ್ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದ ವಿನೇಶ್ ಫೋಗಟ್ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಲೇ ಇದ್ದರು. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅವರು ಈ ಬಾರಿ ಜುಲಾನ್ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಪ್ರಚಾರದ ವೇಳೆಯೂ ಮೋದಿ ಸರ್ಕಾರ ಮತ್ತು ರಿಲಯನ್ಸ್ ಮುಖ್ಯಸ್ಥೆ, ಒಲಿಂಪಿಕ್ಸ್ ಸಮಿತಿ ಸದಸ್ಯೆ ನೀತಾ ಅಂಬಾನಿ ವಿರುದ್ಧ ಕಿಡಿ ಕಾರುತ್ತಲೇ ಇದ್ದರು.
ಜೂಲಾನ್ ಕ್ಷೇತ್ರದಲ್ಲಿ ಯೋಗೇಶ್ ಭಾಯ್ ರಾಜ್ ವಿರುದ್ಧ ಸ್ಪರ್ಧಿಸಿರುವ ವಿನೇಶ್ ಫೋಗಟ್ ಇತ್ತೀಚೆಗಿನ ವರದಿ ಪ್ರಕಾರ ಹಿನ್ನಡೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಯೋಗೇಶ್ ಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕೊನೆಯ ಹಂತದಲ್ಲಿ ಏನು ಬೇಕಾದರೂ ಆಗಬಹುದು.
ವಿನೇಶ್ ಫೋಗಟ್ ಪರವಾಗಿ ಈ ಬಾರಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಬಂದು ಪ್ರಚಾರ ನಡೆಸಿದ್ದರು. ಕುಸ್ತಿ ಪಟುವಾಗಿ ಸ್ಟಾರ್ ವಾಲ್ಯೂ ಹೊಂದಿದ್ದ ವಿನೇಶ್ ಗೆ ಈ ಚುನಾವಣೆಯಲ್ಲಿ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಪಕ್ಷಕ್ಕೆ ಸೇರಿ ಪ್ರಚಾರ ನಡೆಸಿದ್ದು ಯಾಕೋ ಅವರಿಗೆ ಕೈ ಕೊಡುವ ಲಕ್ಷಣ ಕಾಣುತ್ತಿದೆ.