ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ರಾಜ್ಯಸಭೆಯಲ್ಲಿ ಇಂದು ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮೂರು ದಿನ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಬಿಜೆಪಿ ತನ್ನ 53 ರಾಜ್ಯಸಭಾ ಸಂಸದರಿಗೆ ವಿಪ್ ಜಾರಿ ಮಾಡಿದೆ.
ಅಧಿಕೃತ ತಿದ್ದುಪಡಿ ಕರಡು ಪ್ರತಿಯನ್ನು ಎಲ್ಲಾ ಸದಸ್ಯರಿಗೂ ನೀಡಲಾಗಿದ್ದು, ಮಧ್ಯಾಹ್ನ 2 ಗಂಟೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಪರಿಷ್ಕೃತ ಕರಡು ಮಸೂದೆಯನ್ನು ಮಂಡಿಸಲಿದ್ದಾರೆ.
ಇದು ಸಾಂವಿಧಾನಿಕ ತಿದ್ದುಪಡಿ ಮಸೂದೆಯಾಗಿರೋದ್ರಿಂದ ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಅಗತ್ಯವಿದೆ.
ವಿಪಕ್ಷಗಳ ಬೇಡಿಕೆಯಂತೆ ಮಸೂದೆಯಲ್ಲಿ ಸರ್ಕಾರ ಕೆಲವು ತಿದ್ದುಪಡಿಗಳನ್ನು ತರುತ್ತಿದ್ದು ಕಾಂಗ್ರೆಸ್ ಮತ್ತು ಇತರ ಎಲ್ಲ ಪ್ರಮುಖ ವಿರೋಧ ಪಕ್ಷಗಳು ಬೆಂಬಲ ನೀಡುವ ಸುಳಿವು ನೀಡಿವೆ. ಹಾಗಾಗಿ ಈ ಬಾರಿ ರಾಜ್ಯಸಭೆಯಲ್ಲಿ ಜಿಎಸ್‌ಟಿ ಅಂಗೀಕಾರವಾಗುವುದು ಬಹುತೇಕ ಖಚಿತವೆನಿಸಿದೆ.
ರಾಜ್ಯಸಭೆಯ ಅನುಮೋದನೆ ನಂತರ ರಾಜ್ಯಗಳ ಅಂಗೀಕಾರ ಪಡೆಯಬೇಕಿರುವ ಮಸೂದೆ ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಕಾಯಿದೆ ಸ್ವರೂಪ ಪಡೆಯಲಿದೆ.
‘ಜಿಎಸ್‌ಟಿ ಮಸೂದೆ ಅಂಗೀಕಾರಕ್ಕಾಗಿ ಕಲಾಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಎಲ್ಲ ಪಕ್ಷಗಳ ಬೆಂಬಲ ಕೋರುತ್ತಿದ್ದೇವೆ. ಮಸೂದೆಯ ಪಾಸ್ ಆಗುವ ಸಾಧ್ಯತೆಗಳು ದಟ್ಟವಾಗಿವೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಸೋಮವಾರ ಅನಂತಕುಮಾರ್ ಭರವಸೆ ವ್ಯಕ್ತ ಪಡಿಸಿದ್ದರು.
ಈ ಮಸೂದೆ ಅಂಗೀಕಾರವಾದರೆ ದೇಶದಾದ್ಯಂತ ಒಂದೇ ಪರೋಕ್ಷ ತೆರಿಗೆ ಜಾರಿಗೆ ಬರುತ್ತದೆ.
ಮುಖ್ಯವಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಜಿಎಸ್‌ಟಿ ಮಸೂದೆಗೆ ಬೆಂಬಲ ನೀಡಲು ಒಪ್ಪುತ್ತಿಲ್ಲ. ಇದರಿಂದ ನಮ್ಮ ರಾಜ್ಯದ ಆದಾಯಕ್ಕೆ ಹೊಡೆತ ಬೀಳುತ್ತಿದೆ ಎಂಬುದು ಅವರ ಅಭಿಪ್ರಾಯ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.