ಪಾಟ್ನಾ: ದ್ವಿಚಕ್ರ ವಾಹನದಲ್ಲಿ ಓಡಾಡುವಾಗ ಅಪಘಾತವಾದರೆ ತಲೆಗೆ ಏಟಾಗದಿರಲಿ ಎಂಬ ಕಾರಣಕ್ಕೆಹೆಲ್ಮೆಟ್ ಹಾಕಿಕೊಳ್ಳುವುದು ಸಾಮಾನ್ಯ. ಆದರೆ ಬಿಹಾರದ ಸರ್ಕಾರಿ ಕಚೇರಿಯೊಂದರಲ್ಲಿ ಅಧಿಕಾರಿಗಳು ಕಚೇರಿಯೊಳಗೆ ಕೆಲಸ ಮಾಡುವಾಗಲೂ ಹೆಲ್ಮೆಟ್ ಹಾಕಿಕೊಂಡು ಕೆಲಸ ಮಾಡುತ್ತಾರೆ. ಕಾರಣ ತುಂಬಾ ವಿಚಿತ್ರವಾಗಿದೆ!
ಇವರೆಲ್ಲರಿಗೂ ದ್ವಿಚಕ್ರ ವಾಹನವಿರುವುದೇನೋ ಸರಿ. ಆದರೆ ಕಚೇರಿಯೊಳಗೆ ಹೆಲ್ಮೆಟ್ ಯಾಕೆ ಎಂದು ಕೆದಕುತ್ತಾ ಹೋದರೆ ಇಂಟರೆಸ್ಟಿಂಗ್ ಉತ್ತರ ದೊರಕುತ್ತದೆ. ಅಲ್ಲದೆ ನಮ್ಮ ಭಾರತದ ಸರ್ಕಾರಿ ಕಚೇರಿಗಳ ದುರವಸ್ಥೆಯ ವಾಸ್ತವಾಂಶ ಬಿಚ್ಚಿಡುತ್ತದೆ.
ಇಲ್ಲಿ ಅಧಿಕಾರಿಗಳು ತಮ್ಮ ತಲೆಯನ್ನು ರಕ್ಷಿಸಿಕೊಳ್ಳುವುದಕ್ಕೇ ಹೆಲ್ಮೆಟ್ ಹಾಕುತ್ತಾರೆ. ಅದೂ ತಮ್ಮ ಕಚೇರಿಯ ಸೂರಿನಿಂದ ನೀರು ತೊಟ್ಟಿಕ್ಕುತ್ತಿರುತ್ತದಂತೆ. ಅಲ್ಲದೆ, ಅದು ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಯಾವಾಗ ತಮ್ಮ ತಲೆಗೆ ಬಿದ್ದು ಗಾಯ ಮಾಡುತ್ತದೋ ಎಂಬ ಭೀತಿಯಲ್ಲಿ ಅಧಿಕಾರಿಗಳಿದ್ದಾರೆ.
ಇದೇ ಕಾರಣಕ್ಕೆ ಅಂತಹ ಏನೇ ಅನಾಹುತವಾದರೂ, ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಈ ಅಧಿಕಾರಿಗಳು ಹೆಲ್ಮೆಟ್ ಹಾಕಿಕೊಂಡೇ ಕೆಲಸ ಮಾಡುತ್ತಾರಂತೆ! ಈ ಸರ್ಕಾರಿ ಕಚೇರಿಯ ಕಟ್ಟಡ ತುಂಬಾ ಹಳೆಯದಾಗಿದೆ. ಯಾವಾಗ ಬೀಳುತ್ತದೋ ಎನ್ನುವಂತಿದೆ. ಹಾಗಿದ್ದರೂ ನಮ್ಮ ಕರ್ತವ್ಯ ತಪ್ಪಿಸುವಂತಿಲ್ಲವಲ್ಲ? ಅದಕ್ಕೇ ಹೆಲ್ಮೆಟ್ ಹಾಕಿಕೊಂಡು ಕೆಲಸ ಮಾಡುತ್ತೇವೆ ಎಂದಿದ್ದಾರೆ ಅಧಿಕಾರಿಯೊಬ್ಬರು! ಎಲ್ಲಿಗೆ ಬಂತು ನೋಡಿ ನಮ್ಮ ಪರಿಸ್ಥಿತಿ?