ಜಮ್ಮು ಮತ್ತು ಕಾಶ್ಮೀರದ 50,000 ಯುವಕ/ಯುವತಿಯರಿಗೆ ಉದ್ಯೋಗ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಪಸಂಖ್ಯಾತ ಸಚಿವಾಲಯದ ಮುತುವರ್ಜಿಯಲ್ಲಿ ಈ ಮಹಾತ್ವಾಕಾಂಕ್ಷಿ ಯೋಜನೆ ಜಾರಿಗೆ ಬರಲಿದೆ.
ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶ್ರೀನಗರ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಈ ಘೋಷಣೆಯಾಗಿದೆ. ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ರಾಜ್ಯದಲ್ಲಿ ಎದ್ದಿರುವ ಉದ್ವಿಗ್ನ ಪರಿಸ್ಥಿತಿ ತಣಿಯುವ ಲಕ್ಷಣಗಳೇ ಕಾಣುತ್ತಿಲ್ಲ. 7 ವಾರಗಳಿಗಿಂತ ಹೆಚ್ಚು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರ, ಗಲಭೆಯಲ್ಲಿ ಇಲ್ಲಿಯವರೆಗೆ 70 ಜನರು ಸಾವನ್ನಪ್ಪಿದ್ದಾರೆ.
ವಿರೋಧ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ನೇತೃತ್ವದ ವಿರೋಧ ಪಕ್ಷದ ನಾಯಕರ ನಿಯೋಗದ ಜತೆ ಸಭೆ ನಡೆಸಿದ ಪ್ರಧಾನಿ ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಆಳವಾದ ನೋವು ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಸ್ಥಿತಿಯ ಮರುಸ್ಥಾಪನೆಗೆ ಮನವಿ ಮಾಡಿದ ಅವರು ರಾಜ್ಯದ ಮತ್ತು ಜನರ ಅಭಿವೃದ್ಧಿಗೆ ಬದ್ಧರಾಗಿರುವುದಾಗಿ ಹೇಳಿದ್ದರು.