ನಿಗದಿಯಂತೆ ಇಂದೇ ಬಜೆಟ್ ಮಂಡನೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಮಾಜಿ ಸಚಿವ, ಸಂಸದ ಇ. ಅಹ್ಮದ್ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಜೆಟ್ ಮಂಡನೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು.
ಎಲ್ಲ ಪಕ್ಷಗಳ ನಾಯಕರ ಜತೆ ಮಾತನಾಡಿದ ಬಳಿಕ ಕೇಂದ್ರ ಸರ್ಕಾರ ಬಜೆಟ್ ಮುಂದೂಡದಿರಲು ನಿರ್ಧರಿಸಿತು. 11 ಗಂಟೆಗೆ ಕಲಾಪ ಆರಂಭಗೊಳ್ಳಲಿದ್ದು ಮೃತಪಟ್ಟ ಸಂಸದರಿಗೆ ಸಂತಾಪ ಸೂಚಿಸಿದ ಬಳಿಕ ವಿತ್ತ ಸಚಿವರು ಬಜೆಟ್ ಮಂಡನೆ ಮಾಡಲಿದ್ದಾರೆ.
ಈಗಾಗಲೇ ಸಂಸತ್ತು ತಲುಪಿರುವ ಸಚಿವ ಅರುಣ್ ಜೇಟ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಬಜೆಟ್ ಸಾರಾಂಶವನ್ನು
ವಿವರಿಸಿದ್ದಾರೆ.
ನಿನ್ನೆ ಬಜೆಟ್ ಅಧಿವೇಶನ ಆರಂಭವಾಗುವ ಸಂದರ್ಭದಲ್ಲಿ ರಾಷ್ಟ್ರಪತಿ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ 78 ವರ್ಷದ ಕೇರಳದ ಸಚಿವ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆರ್‌ಎಮ್ಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಸುಕಿನ ಜಾವ 2 ಗಂಟೆಗೆ ವಿಧಿವಶರಾಗಿದ್ದಾರೆ.
ಲೋಕಸಭೆ ಹಾಲಿ ಸದಸ್ಯರು ನಿಧನರಾದರೆ ಅವರ ಗೌರವಾರ್ಥ ಕಲಾಪವನ್ನು ಒಂದು ದಿನ ಮುಂದೂಡುವುದು ಸಂಪ್ರದಾಯ. ಅದರಲ್ಲೂ ಅಹ್ಮದ್ ಸಂಸತ್ತಿನಲ್ಲಿಯೇ ಕುಸಿದುಬಿದ್ದಿದ್ದು, ಹೀಗಾಗಿ ಬಜೆಟ್ ಮಂಡನೆ ಒಂದು ದಿನ ಮುಂದೂಡಲ್ಪಡುತ್ತದೆ ಎಂದು ಹೇಳಲಾಗುತ್ತಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ