ಉಪರಾಷ್ಟ್ರಪತಿ ಚುನಾವಣೆಗೆ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ಅಭ್ಯರ್ಥಿಯಾಗಿ ಯುಪಿಎ ಮೈತ್ರಿಕೂಟ ಆಯ್ಕೆ ಮಾಡಿದೆ.
ಸಂಸತ್ತಿನಲ್ಲಿ ಇಂದು ಯುಪಿಎ ಮೈತ್ರಿಕೂಟದ 18 ಪಕ್ಷಗಳ ನಾಯಕರು ಒಂದು ಕಡೆ ಸಭೆ ಸೇರಿ ಚರ್ಚಿಸಿದ ನಂತರ ಅಂತಿಮವಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿಯನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, 18 ಪಕ್ಷಗಳು ಅವಿರೋಧವಾಗಿ ಗಾಂಧಿಯವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿಸಲು ಸಮ್ಮತಿ ಸೂಚಿಸಿವೆ ಎಂದು ತಿಳಿಸಿದ್ದಾರೆ.
ವಿಪಕ್ಷಗಳು ಉಪರಾಷ್ಟ್ರಪತಿ ಅಭ್ಯರ್ಥಿಯಾಗುವಂತೆ ಮಾಡಿದ ಮನವಿಗೆ ಗೋಪಾಲಕೃಷ್ಣ ಗಾಂಧಿ ಸ್ಪಂದಿಸಿದ್ದಾರೆ ಎಂದರು.
ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮಾನಾಥ್ ಕೋವಿಂದ್ ಅವರನ್ನು ಜೆಡಿಯು ಬೆಂಬಲಿಸಿತ್ತು. ಇದೀಗ ಜೆಡಿಯು ಮುಖಂಡ ಶರದ್ ಯಾದವ್ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಸೋನಿಯಾ ಗಾಂಧಿ, ಟಿಎಂಸಿ ಮುಖಂಡ ಡೆರೆಕ್ ಓ ಬ್ರಿಯಾನ್, ಸಿಪಿಐ(ಎಂ) ಸೀತಾರಾಮ್ ಯಚೂರಿ, ಎನ್‌ಸಿ ಓಮರ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ನರೇಶ್ ಅಗರ್‌ವಾಲ್, ಬಿಎಸ್‌ಪಿಯ ಸತೀಶ್ ಚಂದ್ರ ಮಿಶ್ರಾ ಸೇರಿದಂತೆ ಇತರ ನಾಯಕರು ಸಭೆಗೆ ಹಾಜರಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.