ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಬ್ದಾರಿ ಹೇಳಿಕೆ ನೀಡಿ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಪ್ರದೇಶದ ಸಮಾಜವಾದಿ ನಾಯಕ ಮತ್ತೆ ಅದೇ ವಿಷಯಕ್ಕೆ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.
ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮಹಿಳೆಯರೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದ್ದು, ಪೊಲೀಸರಿಗಾಗಿ ಕಾಯುವುದು ಸರಿಯಲ್ಲ ಎಂದು ಬುಧವಾರ ಅವರು ಹೇಳಿದ್ದಾರೆ.
ನನ್ನ ಬಳಿ ಇದ್ದ ಹಣ ಕಳ್ಳತನವಾದರೆ ನಾನು ಮತ್ತೆ ಆ ಜಾಗದಲ್ಲಿ ಹಣವನ್ನಿಡುವುದಿಲ್ಲ. ಹಾಗೆಯೇ ನಮ್ಮ ಮಕ್ಕಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ದೌರ್ಜನ್ಯವೆಸಗುವವರಿಗೆ ಅವಕಾಶ ಮಾಡಿಕೊಡಬಾರದು. ಇದು ನಾನು ಮಹಿಳೆಯರಿಗೆ ಮಾಡುತ್ತಿರುವ ಅಪಮಾನವಲ್ಲ, ಪದಗಳ ಗೌರವ ಎಂದಿದ್ದಾರೆ ಅಜ್ಮಿ.
ತಮ್ಮ ಹಿಂದಿನ ಹೇಳಿಕೆಗೆ ಸಮರ್ಥನೆ ನೀಡಿರುವ ಅವರು ನಾನು ಪ್ರತಿ ಹೆಣ್ಣುಮಗಳನ್ನು ಮಗಳು, ತಾಯಿಯಂತೆ ಗೌರವಿಸುತ್ತೇನೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹೊಸ ವರ್ಷದಂದು ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಅಜ್ಮಿ, ಯುವತಿಯರು ಅರೆನಗ್ನ ಡ್ರೆಸ್ ಧರಿಸಿ ಮಧ್ಯರಾತ್ರಿ ಪಾರ್ಟಿಗಳಲ್ಲಿ ಕುಣಿದಾಡಿ ರಾತ್ರಿ ರಸ್ತೆಗಳಲ್ಲಿ ಸಂಚರಿಸುತ್ತಿರುವುದಕ್ಕೆ ಲೈಂಗಿಕ ಕಿರುಕುಳದಂತಹ ಘಟನೆಗಳು ನಡೆಯುತ್ತಿವೆ. ಪುರುಷರು ಮತ್ತು ಮಹಿಳೆಯರ ನಡುವೆ ವ್ಯತ್ಯಾಸವಿದೆ. ಆದ್ದರಿಂದ,ಮಹಿಳೆಯರು ರಾತ್ರಿ ಹೊತ್ತಿನಲ್ಲಿ ಮನೆಯಿಂದ ಹೊರಗಡೆ ಕಾಲಿಡಬಾರದು ಎಂದು ಪುಕ್ಕಟೆ ಸಲಹೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ