ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಗೃಹ ಸಚಿವ ರಾಜನಾಥ್ ಸಿಂಗ್ ಪಾಕ್‌ಗೆ ತೆರಳಿ ಬಿರಿಯಾನಿ ತಿಂದು ಬಂದರೆ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದೆ ಚೌಧರಿ, ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ತೆರಳಿದ್ದು ಹೊಟ್ಟೆ ಬಿರಿಯುವಂತೆ ಬಿರಿಯಾನಿ ತಿಂದು ಅಲ್ಲಿನ ನಾಯಕರನ್ನು ಅಪ್ಪುವುದರಿಂದ ಉಭಯ ದೇಶಗಳ ನಡುವೆ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 2015ರ ಡಿಸೆಂಬರ್ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ತೆರಳಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಅವರ ತಾಯಿಯನ್ನು ಭೇಟಿ ಮಾಡಿ ಪಾದ ಮುಟ್ಟಿ ನಮಸ್ಕರಿಸಿ ಬಂದಿದ್ದರು. ಆದರೆ, ಕೆಲವೇ ದಿನಗಳ ನಂತರ ಪಾಕ್ ಉಗ್ರರು ಪಠಾನ್‌ಕೋಟ್ ಮೇಲೆ ದಾಳಿ ನಡೆಸಿದರು. ಪಠಾನ್‌ಕೋಟ್ ದಾಳಿಯಲ್ಲಿ ಏಳು ಜನ ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿರುವುದನ್ನು ಮರೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಸಾರ್ಕ್ ಸಮ್ಮೆಳನದ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲು ಅವಕಾಶವಿಲ್ಲ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರೆನ್ ರಿಜಿಜು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.