ನವದೆಹಲಿ: ಚುನಾವಣಾ ಬಾಂಡ್ ಗಳ ಮೂಲಕ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ ನೀಡಿದೆ.
ತಿಲಕ್ ನಗರ ಪೊಲೀಸರಿಗೆ ಎಫ್ಐಆರ್ ದಾಖಲಿಸಲು 42 ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. ಈ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 10 ರಂದು ನಡೆಸಲಿದೆ. ನಿರ್ಮಲಾ ಸೀತಾರಾಮನ್ ಅಲ್ಲದೆ ರಾಜ್ಯದ ಬಿಜೆಪಿ ನಾಯಕರಾದ ನವೀನ್ ಕುಮಾರ್ ಕಟೀಲ್, ಬಿ ವೈ ವಿಜಯೇಂದ್ರ ಸೇರಿದಂತೆ ಕೆಲವರ ವಿರುದ್ಧವೂ ದೂರು ದಾಖಲಾಗಿದೆ.
ಜನಾಧಿಕಾರಿ ಸಂಘರ್ಷ ಪರಿಷತ್ ನ ಆದರ್ಶ ಆರ್. ಅಯ್ಯರ್ ಎಂಬವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ದೂರು ಸಲ್ಲಿಸಿದ್ದಾರೆ. ದೂರಿನ ವಿಚಾರಣೆ ನಡೆಸಿದ ಕೋರ್ಟ್ ದೂರಿನ ಪ್ರತಿಯನ್ನು ತಿಲಕ್ ನಗರ ಪೊಲೀಸ್ ಠಾಣೆಗೆ ಕಳುಹಿಸಲು ಸೂಚನೆ ನೀಡಿದೆ. ಅಲ್ಲದೆ ಅಕ್ಟೋಬರ್ 10 ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.
ಏನಿದು ಆರೋಪ?
ಚುನಾವಣಾ ಬಾಂಡ್ ಮೂಲಕ ಕಾರ್ಪೋರೇಟ್ ಕಂಪನಿಗಳ ಸುಲಿಗೆ ಮಾಡಲಾಗಿದೆ. ಬೆದರಿಸಿ 8,000 ಕೋಟಿ ರೂ. ವಸೂಲಿ ಮಾಡಲಾಗಿದೆ. ಹಣ ನೀಡದವರಿಗೆ ಇಡಿ ದಾಳಿಯ ಬೆದರಿಕೆ ಹಾಕಲಾಗಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ನವೀನ್ ಕುಮಾರ್ ಕಟೀಲ್, ಬಿ ವೈ ವಿಜಯೇಂದ್ರ ಹಣ ಸಂಗ್ರಹಣೆ ಮಾಡಿದ್ದಾರೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪ ಹೊರಿಸಲಾಗಿದೆ.