ತಿರುಪತಿ: ಮಕ್ಕಳು ಸಾಧನೆ ಮಾಡಿ ಎದುರು ನಿಂತಾಗ ಹೆತ್ತಕರುಳಿಗೆ ಹೆಮ್ಮೆಯಾಗುವುದು ಸಹಜ. ಇಂತಹದ್ದೇ ಘಟನೆಗೆ ತಿರುಪತಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಾಕ್ಷಿಯಾಗಿದ್ದಾರೆ.
ತಿರುಪತಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ತನ್ನ ಎದುರು ನಿಂತಿದ್ದ ಮಗಳು ಜೆಸ್ಸಿ ಪ್ರಶಾಂತಿಗೆ ತಂದೆ, ಸರ್ಕಲ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಸೆಲ್ಯೂಟ್ ಹೊಡೆದಿದ್ದಾರೆ. ಕಾರಣ, ತಂದೆ ಸರ್ಕಲ್ ಇನ್ಸ್ ಪೆಕ್ಟರ್ ಆದರೆ, ಪುತ್ರಿ ಅವರ ಮೇಲಧಿಕಾರಿ! 2018 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಪ್ರಶಾಂತಿ ಈಗ ಡಿಎಸ್ಪಿ. ಇದೇ ಮೊದಲ ಬಾರಿಗೆ ಕರ್ತವ್ಯದಲ್ಲಿದ್ದಾಗ ತಂದೆ-ಮಗಳು ಇಬ್ಬರೂ ಮುಖಾಮುಖಿಯಾಗಿದ್ದಾರೆ. ಈ ವೇಳೆ ತಂದೆ, ಪುತ್ರಿಗೆ ನಗು ನಗುತ್ತಲೇ ಹೆಮ್ಮೆಯಿಂದ ಸೆಲ್ಯೂಟ್ ಮಾಡುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.