ರಾಜಧಾನಿ ದೆಹಲಿಯ ಜಂತರ್ ಮಂಥರ್ ನಲ್ಲಿ ಮಾಧ್ಯಮ ಸಿಬ್ಬಂದಿ ಮೇಲೆ ದಾಳಿ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವೆ, ಪ್ರತಿಪಕ್ಷಗಳು ಇಂತಹ ಚಟುವಟಿಕೆಗಳನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದರು.
ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ, ಗೂಂಡಾಗಳು, ಇವುಗಳು ಅಪರಾಧ ಚಟುವಟಿಕೆಗಳಾಗಿವೆ, ಜನವರಿ 26 ರಂದು ಸಂಭವಿಸಿದ ಘಟನೆಗಳು ಕೂಡಾ ನಾಚಿಕೆಗೇಡಿನ ಅಪರಾಧ ಚಟುವಟಿಕೆಗಳಾಗಿವೆ. ಇಂತಹ ಚಟುವಟಿಕೆಗಳನ್ನು ಪ್ರತಿಪಕ್ಷಗಳು ಪ್ರಚೋದಿಸುತ್ತಿವೆ ಎಂದರು.
ಮೀನಾಕ್ಷಿ ಲೇಖಿ ವಿರುದ್ಧ ವಾಗ್ದಾಳಿ ನಡೆಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ರೈತರು ಅನ್ನದಾತರು, ಅವರನ್ನು ಗೂಂಡಾಗಳು ಅಂತ ಹೆಸರಿನಿಂದ ಕರೆದಿರುವುದು ಸರಿಯಾಗಿಲ್ಲ. ನಾವು ರೈತರು, ಗೂಂಡಾಗಳಲ್ಲ, ರೈತರು ನೆಲದ ಅನ್ನದಾತರು ಎಂದು ಹೇಳಿದರು.
ಮೀನಾಕ್ಷಿ ಲೇಖಿ ನೀಡಿರುವ ಹೇಳಿಕೆ ದೇಶದ 80 ಕೋಟಿ ರೈತರಿಗೆ ಅಪಮಾನ ಮಾಡಿದೆ. ನಾವು ಗೂಂಡಾಗಳಾದರೆ, ನಾವು ಬೆಳೆದ ಆಹಾರ ಧಾನ್ಯ ತಿನ್ನುವುದನ್ನು ಮೀನಾಕ್ಷಿ ಲೇಖಿ ನಿಲ್ಲಿಸಬೇಕು. ಅವರಿಗೆ ನಾಚಿಕೆಯಾಗಬೇಕು, ಆಕೆಯ ಹೇಳಿಕೆ ಖಂಡಿಸಿ ರೈತರ ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ರೈತ ಮುಖಂಡ ಶಿವ ಕುಮಾರ್ ಕಕ್ಕಾ ತಿಳಿಸಿದರು.