ಕಣಿವೆಯಲ್ಲಿ ಶಾಂತಿ ಮರುಸ್ಥಾಪಿಸುವ ಯತ್ನಕ್ಕೆ ಪ್ರತ್ಯೇಕತಾವಾದಿಗಳು ಸಹಕಾರ ನೀಡದಿದ್ದರಿಂದ ಅವರಿಗೆ ನೀಡಿದ್ದ ಸೌಲಭ್ಯಗಳನ್ನು ಮೊಟಕು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರತ್ಯೇಕತಾವಾದಿ ಮುಖಂಡರಿಗೆ 24 ಗಂಟೆ ಭದ್ರತೆ ಮತ್ತು ರೋಗಪೀಡಿತ ಮುಖಂಡರಿಗೆ ಹೈಟೆಕ್ ವೈದ್ಯಕೀಯ ಸೌಲಭ್ಯಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ.
ಪಾಸ್‌ಪೋರ್ಟ್ ಹಿಂತೆಗೆದುಕೊಳ್ಳುವ ಮೂಲಕ ವಿದೇಶ ಪ್ರಯಾಣವನ್ನು ಅವರಿಗೆ ಕಷ್ಟವಾಗಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಪ್ರತ್ಯೇಕತಾವಾದಿಗಳಿಗೆ ಕಠಿಣ ಸಂದೇಶ ಕಳಿಸಲು ಅವರ ಬ್ಯಾಂಕ್ ಖಾತೆ ಪರಿಶೀಲನೆ ಮತ್ತು ಅವರ ವಿರುದ್ಧ ಬಾಕಿಯಿರುವ ತನಿಖೆ ಮುಗಿಸಲು ತನಿಖೆದಾರರಿಗೆ ಸೂಚಿಸಬಹುದು.
ಪ್ರತ್ಯೇಕತಾವಾದಿ ನಾಯಕರಿಗೆ ನೀಡುವ ಸೌಲಭ್ಯಗಳ ಮರುಪರಿಶೀಲನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಕಾಶ್ಮೀರದಲ್ಲಿನ ವಾಸ್ತವ ಸ್ಥಿತಿಗತಿ ಮತ್ತು ರಾಜ್ಯಕ್ಕೆ ಸರ್ವಪಕ್ಷ ನಿಯೋಗದ ಭೇಟಿ ಕುರಿತು ರಾಜನಾಥ್ ಸಿಂಗ್ ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಪ್ರಧಾನಿ ಸೂಚನೆ ಹೊರಬಿದ್ದಿದೆ.
ಪ್ರತ್ಯೇಕತಾವಾದಿಗಳು ಹಿಂಸಾತ್ಮಕ ಪ್ರತಿಭಟನೆಗಳನ್ನು ಕೊನೆಗೊಳಿಸಲು ಸಹಾಯಹಸ್ತ ನೀಡುತ್ತಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಪ್ರತ್ಯೇಕತಾವಾದಿಗಳು ದೂರಿದ್ದಾರೆ.