ಉಚ್ಛಾಟಿತರಾಗಿರುವ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಅವರನ್ನು ಬಿಹಾರದ ಬಕ್ಸಾರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಿಎಸ್‌ಪಿ ನಾಯಕಿ ಮಾಯಾವತಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅವರ ವಿರುದ್ಧ ಹಲವು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಉತ್ತರ ಪ್ರದೇಶ ಹಾಗೂ ಬಿಹಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಿಜೆಪಿ ಉತ್ತರಪ್ರದೇಶ ಮಾಜಿ ಉಪಾಧ್ಯಕ್ಷರಾಗಿದ್ದ ಸಿಂಗ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚಿಗೆ ಸಿಂಗ್ ಜಾರ್ಖಂಡ್‌ನ ದಿಯೋಗಢ ಜಿಲ್ಲೆಯ ಶಿವ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ದೇವಸ್ಥಾನದ ಅರ್ಚಕ ಸಿಂಗ್ ಜತೆಗಿದ್ದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ಬಳಿಕ ಅದನ್ನು ಡಿಲಿಟ್ ಮಾಡಲಾಗಿತ್ತು.
ಬಿಎಸ್‌ಪಿ ನಾಯಕಿ ಮಾಯಾವತಿ ಅವರು ವೇಶ್ಯೆಗಿಂತ ಕಡೆ ಎಂದು ಸಿಂಗ್ ಹೇಳಿದ್ದು ವಿವಾದವನ್ನು ಹುಟ್ಟಿ ಹಾಕಿತ್ತು. ದಯಾಶಂಕರ್ ಅವರ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪಕ್ಷದ ಹುದ್ದೆಗಳಿಂದ ಅವರನ್ನು ವಜಾ ಮಾಡಲಾಗಿತ್ತು.
ಚುನಾವಣೆ ಸಂದರ್ಭದಲ್ಲಿ ಬಿಎಸ್‌ಪಿ ಹೆಚ್ಚು ಹಣ ನೀಡಿದ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡುವ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದಯಾಶಂಕರ್ ಸಿಂಗ್ ಆರೋಪಿಸಿದ್ದರು.