ಸಿಎಂ ಆಗುವುದಕ್ಕೂ ಮೊದಲಿನಿಂದಲೂ ವಿಚಿತ್ರ ಹೇಳಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್, ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಬಳಿ ಎದ್ದಿರುವ ಇವಿಎಂ ದೋಷದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ಇವಿಎಂ ಎಂದರೆ `ಎವೆರಿ ವೋಟ್ ಮೋದಿ’ ಎಂದಿದ್ದಾರೆ.
ಇತ್ತೀಚೆಗೆ ನಡೆದ ದೆಹಲಿಯ ಮೂರೂ ಮಹಾನಗರಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಗಳಿಸಿದೆ. ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿರುವ ಜನರು ಈಗಲಾದರೂ ತಿಳಿಯಬೇಕು. ಇವಿಎಂ ಎಂದರೆ ಎವೆರಿ ವೋಟ್ ಮೋದಿ ಎಂದು ಯೋಗಿ ಆದಿತ್ಯಾನಾಥ್ ಲೇವಡಿ ಮಾಡಿದ್ದಾರೆ.
ಸಾಮಾನ್ಯ ಜನರನ್ನ ಕಡೆಗಣಿಸಿದರೆ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬುದನ್ನ ಅವರು ಮನಗಾಣಬೇಕು. ಉತ್ತರಪ್ರದೇಶದಲ್ಲೂ ಎಸ್ ಮತ್ತು ಬಿಎಸ್ಪಿ ಪಕ್ಷಗಳು ಇವಿಎಂ ಪ್ರಶ್ನೆ ಎತ್ತಿದ್ದವು ಎಂದರು. ಇದೇವೇಳೆ, ಉತ್ತರಪ್ರದೇಶದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಆದಿತ್ಯಾನಾಥ್, ರಾಜ್ಯ ಮತ್ತು ಕೇಂದ್ರ ಕಾರ್ಯಕ್ರಮಗಳಿಂದ ಜನ ಸಂಪೂರ್ಣ ತೃಪ್ತರಾಗಿದ್ದಾರೆ ಎಂದರು. ರೆಡ್ ಬ್ಯಾನ್ ಮಾಡುವ ಮೂಲಕ ವಿಐಪಿ ಸಂಸ್ಕೃತಿ ಕೊನೆಗಾಣಿಸಿದ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯಾನಾಥ್, ಪ್ರತಿಯೊಬ್ಬ ನಾಗರಿಕನೂ ವಿಐಪಿ ಎಂಬ ಸಂದೇಶವನ್ನ ಮೊದಿ ಸಾರಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ.