ಲಕ್ನೋ: ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ಉತ್ತರ ಪ್ರದೇಶದ ಸರ್ಕಾರ 218 ಫಾಸ್ಟ್ ಟ್ರ್ಯಾಕ್ ಕೋರ್ಟುಗಳನ್ನು ಸ್ಥಾಪಿಸಲು ನಿರ್ಧಾರ ಮಾಡಿದೆ.
ಉತ್ತರ ಪ್ರದೇಶದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ತಡೆಯುವ ಹಾಗೂ ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಯು.ಪಿ ಸಿಎಂ ಯೋಗಿ ಆದಿತ್ಯನಾಥ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ 218 ಕೋರ್ಟುಗಳಿಗೆ 218 ಹೆಚ್ಚುವರಿ ಸೆಷನ್ ಜಡ್ಜ್ ಗಳನ್ನು ನೇಮಿಸಲಾಗುವುದು. ಇದರಲ್ಲಿ 144 ಕೋರ್ಟುಗಳು ಅತ್ಯಾಚಾರ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲಿದೆ. ಉಳಿದ 74 ಕೋರ್ಟುಗಳು ಪೊಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆ ನಡೆಸಲಿದೆ. ಹಾಗೇ ಈ ಕೋರ್ಟ್ ನಲ್ಲಿ ತಗಲುವ ವೆಚ್ಚವನ್ನು ಶೇ.60ರಷ್ಟು ಕೇಂದ್ರ ಸರ್ಕಾರ ಭರಿಸಿದರೆ ಇನ್ನು ಶೇ.40ರಷ್ಟು ಯುಪಿ ಸರ್ಕಾರ ಭರಿಸಲಿದೆ ಎನ್ನಲಾಗಿದೆ.