ದೇಶದ ಸಂವಿಧಾನ ಕಾಯ್ದೆ 324 ಅನ್ವಯ ಚುನಾವಣೆ ಆಯೋಗ ಚುನಾವಣೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಹೊಂದಿರಬೇಕು. ಪ್ರಸ್ತುತವಿರುವ ಚುನಾವಣೆ ಆಯೋಗ ಕಾಯ್ದೆ ಪಾಲಿಸುತ್ತಿದೆಯೇ? ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಪ್ರಶ್ನಿಸಿದ್ದಾರೆ.
ಚುನಾವಣೆ ಆಯೋಗದ ಕ್ರಮದ ಹಿಂದೆ ಕೇಂದ್ರ ಸರಕಾರದ ಒತ್ತಡ ಕಾರಣವಾಗಿದೆ. ಕೊನೆಯ ಗಳಿಗೆಯಲ್ಲಿ ಜನತೆಗೆ ಆಮಿಷವೊಡ್ಡಲು ಅವಕಾಶ ನೀಡಲಾಗಿದೆ ಎಂದು ವಿಪಕ್ಷಗಳು ಟೀಕಿಸುತ್ತಿರುವ ಸಂದರ್ಭದಲ್ಲಿಯೇ ವರುಣ್ ಗಾಂಧಿ ಹೇಳಿಕೆ ಹೊರಬಿದ್ದಿದೆ.
ಕೇಂದ್ರ ಚುನಾವಣೆ ಆಯೋಗ ಹಲ್ಲಿಲ್ಲದ ಹುಲಿಯಂತೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ವೆಚ್ಚದ ವಿವರವನ್ನು ನೀಡದಿದ್ದರೂ ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಪಡಿಸುವುದಿಲ್ಲ, ಸಾಮಾನ್ಯ ಹಿನ್ನೆಲೆಯ ವ್ಯಕ್ತಿಗಳ ಸ್ಪರ್ಧಗೆ ಅವಕಾಶ ನೀಡುವುದಿಲ್ಲ. ಇದೆಂತಹ ಚುನಾವಣೆ ಆಯೋಗ ಎಂದು ಕಿಡಿಕಾರಿದ್ದಾರೆ.
ನ್ಯಾಶನಲ್ ಯುನಿವರ್ಸಿಟಿ ಆಫ್ ಲಾ ಕಾಲೇಜಿನಲ್ಲಿ ಭಾರತದಲ್ಲಿ ರಾಜಕೀಯ ಸುಧಾರಣೆ ಕುರಿತ ಉಪನ್ಯಾಸದ ಅಂಗವಾಗಿ ಮಾತನಾಡಿದ ವರುಣ್, ಚುನಾವಣೆ ಮುಗಿದ ನಂತರ ಪ್ರಕರಣಗಳನ್ನು ದಾಖಲಿಸುವ ಅಧಿಕಾರ ಕೂಡಾ ಆಯೋಗಕ್ಕೆ ಇರುವುದಿಲ್ಲ, ಅದನ್ನು ಮಾಡಲು ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಎಂತಹ ವಿಚಿತ್ರ ಚುನಾವಣೆ ಆಯೋಗ ಎಂದು ಲೇವಡಿ ಮಾಡಿದರು.
ಚುನಾವಣಾ ವೆಚ್ಚದ ವಿವರವನ್ನು ಸಮಯಕ್ಕೆ ಸರಿಯಾಗಿ ಪಾವತಿಸದ ಯಾವುದೇ ರಾಜಕೀಯ ಪಕ್ಷದ ಮಾನ್ಯತೆಯನ್ನು ಕೇಂದ್ರ ಚುನಾವಣೆ ಆಯೋಗ ರದ್ದುಪಡಿಸಿಲ್ಲ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿಕಾರಿದ್ದಾರೆ.