ಗಂಗಾ ನದಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿಗೆ ಕೆರಳಿರುವ ಬಿಜೆಪಿಯ ಫೈಯರ್ ಬ್ರಾಂಡ್ ನಾಯಕಿ, ಕೇಂದ್ರ ಜಲಸಂಪನ್ಮೂಲ ಖಾತೆ ,ಸಚಿವೆ ಉಮಾ ಭಾರತಿ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ರಾಹುಲ್ ಗಂಗಾನದಿ ಪ್ರದೇಶಕ್ಕೆ ಬರಲಿ. ನಾವು ಮಾಡಿದ್ದ ವಾಗ್ದಾನದ್ತಂತೆ ಗಂಗಾ ನದಿ ಸ್ವಚ್ಛತಾ ಕಾರ್ಯ ಆರಂಭವಾಗಿಲ್ಲವೆಂದರೆ ನಾನು ಗಂಗಾ ನದಿಗೆ ಹಾರುತ್ತೇನೆ. ಕೆಲಸ ಆರಂಭವಾಗಿದ್ದರೆ ತಮ್ಮ ಮಾತಿನ ತಪ್ಪಿಗೆ ರಾಹುಲ್ ಗಂಗಾನದಿಗೆ ಹಾರಲಿ, ಎಂದು ಸವಾಲು ಹಾಕಿದ್ದಾರೆ.
ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಅವರು, ರಾಹುಲ್ ಅವರಿಗೆ ರಾಜಕೀಯ ಮತ್ತು ಗಂಗಾನದಿ ಬಗ್ಗೆ ಏನೂ ಅರಿವಿಲ್ಲ. ಅವರ ತಾಯಿ ಸೋನಿಯಾ ಗಾಂಧಿ ಗಂಗಾ ವಿಷಯದಲ್ಲಿ ನನ್ನ ಜತೆ ಭಾವನಾತ್ಮಕವಾಗಿ ಚರ್ಚಿಸುತ್ತಾರೆ.ಅವರಾದರೂ ತಮ್ಮ ಮಗನಿಗೆ ಗಂಗೆ ಮಹತ್ವ ತಿಳಿಸಿಕೊಡಲಿ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಂತಿಮ ಹಂತದ ಚುನಾವಣಾ ಪ್ರಾರ ಮಾಡುತ್ತಿರುವ ರಾಹುಲ್ ಗಾಂಧಿ, ಗುರುವಾರ ಗಂಗಾ ನದಿ ಶುದ್ಧಿಗೆ ಸಂಬಂಧಿಸಿದಂತೆ ಕೊಟ್ಟ ಮಾತನ್ನು ಪ್ರಧಾನಿ ಮೋದಿ ಉಳಿಸಿಕೊಂಡಿಲ್ಲ ಎಂದು ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಗಂಗಾ ಶುದ್ಧಿ ಹೊಣೆ ಹೊತ್ತಿರುವ ಉಮಾಭಾರತಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.