ಶಶಿಕಲಾ ನಟರಾಜನ್ ಅವರಿಗೆ ಶಿಕ್ಷೆ ಘೋಷಣೆಯಾದ ಬೆನ್ನಲ್ಲೇ ಅಣ್ಣಾಡಿಎಂಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕನಾಗಿ ಲೋಕೋಪಯೋಗಿ ಖಾತೆ ಸಚಿವ ಎಡಪ್ಪಾಡಿ ಪಳನಿ ಸ್ವಾಮಿಯನ್ನು ಆಯ್ಕೆ ಮಾಡಲಾಗಿದೆ.ತಮ್ಮ ನಾಯಕಿ ಜೈಲುಪಾಲಾಗುತ್ತಿದ್ದರೂ, ತಮ್ಮದೇ ಬಣ ತಮಿಳುನಾಡಿನ ಗದ್ದುಗೆ ಏರಬೇಕೆಂದು ಶಶಿಕಲಾ ಗುಂಪು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಜಯಾ ತಮ್ಮ ವಿಧೇಯ ಪನ್ನೀರ್ ಸೆಲ್ವಂ ಅವರಿಗೆ ಪಟ್ಟ ನೀಡಿದಂತೆ ತಮ್ಮ ನಂಬಿಕಸ್ತ ಪಳನಿ ಸ್ವಾಮಿಗೆ ಅಧಿಕಾರದ ಚುಕ್ಕಾಣಿ ಹಿಡಿಸಲು ಶಶಿಕಲಾ ನಿರ್ಧರಿಸಿದ್ದಾರೆ.
ತಾವು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿರುವ ಪಳನಿ ಸ್ವಾಮಿ ಸರಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದಾರೆ.
ಮತ್ತೀಗ ಪನ್ನೀರ್ ಸೆಲ್ವಂ ಮರಳಿ ರಾಜ್ಯಭಾರವನ್ನು ಸಂಭಾಳಿಸುತ್ತಾರೋ ಅಥವಾ ಅಧಿಕಾರ ಪಳನಿ ಪಾಲಾಗುವುದೋ ಎಂಬ ಕುತೂಹಲ ಮನೆ ಮಾಡಿದೆ. ಇಂದು ರಾತ್ರಿ ಜಯಾ ಸಮಾಧಿ ಬಳಿ ಧ್ಯಾನ ಮಾಡಿ ಬಳಿಕ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವುದಾಗಿ ಸೆಲ್ವಂ ಸಹ ಹೇಳಿದ್ದು ಅವರನ್ನು ಸಿಎಂ ಹುದ್ದೆಯಲ್ಲಿ ಮುಂದುವರೆಸುವ ಅಧಿಕಾರ ರಾಜ್ಯಪಾಲರಿಗಿದೆ.