ಶ್ರೀನಗರ : ಜಿ20 ಶೃಂಗಸಭೆಗೆ ಭಾರತ ಸಂಪೂರ್ಣ ಸಿದ್ಧವಾಗಿದೆ. ಬರುವ ಗಣ್ಯರಿಗೆ ವಾಸ್ತವ್ಯದೊಂದಿಗೆ ಹಲವು ಹಂತಗಳಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ. ಈ ನಡುವೆ ಭಾರತೀಯ ವಾಯುಸೇನೆಯು ಉತ್ತರ ವಲಯದಲ್ಲಿ ನಡೆಯುತ್ತಿರುವ ತ್ರಿಶೂಲ್ ವ್ಯಾಯಾಮಕ್ಕೆ (ಡ್ರಿಲ್ಲಿಂಗ್) ವಿರಾಮ ನೀಡಿದೆ.
ಸೆಪ್ಟೆಂಬರ್ 10ರ ವರೆಗೆ ಯಾವುದೇ ಯುದ್ಧ ವಿಮಾನಗಳು ಹಾರಾಟ ನಡೆಸುವುದಿಲ್ಲ. ಡ್ರಿಲ್ಲಿಂಗ್ ಕಾರ್ಯಾಚರಣೆಯನ್ನು ಮೊಟಕುಗೊಳಿಸಲಾಗುವುದು ಎಂದು ಐಎಎಫ್ ಅಧಿಕಾರಿಗಳು ಹೇಳಿದ್ದಾರೆ.
ಇದೇ ಅವಧಿಯಲ್ಲಿ ಉ20 ಶೃಂಗಸಭೆ ನಡೆಯಲಿದ್ದು ರಾಜಧಾನಿಯ ವಾಯು ಪ್ರದೇಶವನ್ನು ರಕ್ಷಿಸಲು ಹಾಗೂ ದೇಶಾದ್ಯಂತ ವಾಯುನೆಲೆಗಳಲ್ಲಿ ಹೆಚ್ಚಿನ ನಿಗಾ ಇರಿಸಲು ಫಾಲ್ಕನ್ ಅವಾಕ್ಸ್ ವಿಮಾನವನ್ನ ಕಾರ್ಯಾಚರಣೆಗೆ ಇಳಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ರಫೇಲ್ ಸೇರಿದಂತೆ ಇತರೆ ಸುಧಾರಿತ ಯುದ್ಧ ವಿಮಾನಗಳನ್ನ ವಾಯುನೆಲೆಗಳಲ್ಲಿ ಭದ್ರತೆಗೆ ನಿಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜಿ20 ಶೃಂಗಸಭೆ ಹಿನ್ನೆಲೆ ಗಣ್ಯಾತಿಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಆದ್ದರಿಂದ ಶತ್ರು ವಿಮಾನ ಭಾರತಕ್ಕೆ ನುಸುಳಿದರೆ ಅಥವಾ ಡ್ರೋನ್ ಮೂಲಕ ದಾಳಿ ನಡೆಸುವ ಪ್ರಯತ್ನಗಳು ನಡೆದರೆ ತಕ್ಷಣವೇ ಹೊಡೆದುರುಳಿಸಲು ಸುಧಾರಿತ ಯುದ್ಧವಿಮಾನಗಳ ನಿಯೋಜನೆ ಮಾಡಲಾಗಿದೆ.