ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಅಸ್ವಸ್ಥಗೊಂಡ ಘಟನೆ ನಡೆದಿದೆ. ನಂತರ ಭಾಷಣ ಮಾಡಿದ ಅವರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಟೀಕಿಸಿದರು ಮತ್ತು "ಪ್ರಧಾನಿ ಮೋದಿಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೂ ನಾನು ಬದುಕುತ್ತೇನೆ" ಎಂದು ಹೇಳಿದರು.
ಜೆ & ಕೆ ನಲ್ಲಿ ಮೂರನೇ ಹಂತದ ಚುನಾವಣೆಗೆ ಮುನ್ನ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಖರ್ಗೆ ಅವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ವೇದಿಕೆಯಲ್ಲಿದ್ದ ನಾಯಕರು ಮಲ್ಲಿಕಾರ್ಜುನ ಕೈ ಹಿಡಿದು ಕೂರಿಸಿದ್ದಾರೆ.
ಒಂದು ಗುಟುಕು ನೀರು ಕುಡಿದ ನಂತರ ಆರಾಮ ಖರ್ಗೆ ಅವರು ಮತ್ತೇ ಭಾಷಣ ಮುಂದುವರೆಸಿದರು. "ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ನಾವು ಹೋರಾಡುತ್ತೇವೆ, ನನಗೆ 83 ವರ್ಷ, ನಾನು ಇಷ್ಟು ಬೇಗ ಸಾಯುವುದಿಲ್ಲ, ಪ್ರಧಾನಿ ಮೋದಿಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೆ ನಾನು ಬದುಕುತ್ತೇನೆ" ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ಟೋಬರ್ 1 ರಂದು ನಡೆಯಲಿರುವ ಅಂತಿಮ ಹಂತದ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಮೂರನೇ ಹಂತದ ಮತದಾನಕ್ಕೂ ಮುನ್ನ ಭಾನುವಾರ (ಸೆ.29) ಪ್ರಚಾರ ಕೊನೆಗೊಳ್ಳಲಿದೆ. ಒಂದು ದಶಕದಲ್ಲಿ ಈ ಪ್ರದೇಶದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ.
ಮೊದಲ ಹಂತವು ಸೆಪ್ಟೆಂಬರ್ 18 ರಂದು ನಡೆಯಿತು, ನಂತರ ಎರಡನೇ ಹಂತವು ಸೆಪ್ಟೆಂಬರ್ 25 ರಂದು ನಡೆಯಿತು. ಫಲಿತಾಂಶಗಳನ್ನು ಅಕ್ಟೋಬರ್ 8 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ. ಮೂರನೇ ಹಂತದಲ್ಲಿ, 40 ಕ್ಷೇತ್ರಗಳು ಭಾಗವಹಿಸಲಿವೆ, ಈ ಪೈಕಿ 24 ಕ್ಷೇತ್ರಗಳು ಜಮ್ಮು ವಿಭಾಗದಲ್ಲಿ ನೆಲೆಗೊಂಡಿವೆ.<>