ರಹಸ್ಯ ಕ್ಯಾಮರಾವಿಟ್ಟ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು ಎಂದು ನೊಂದ ವಿದ್ಯಾರ್ಥಿನಿಗಳು ಆಗ್ರಹಿಸಿದ್ದಾರೆ. ಮುಂಜಾನೆ ಕೆಲವು ಬಿ.ಟೆಕ್ ವಿದ್ಯಾರ್ಥಿನಿಯರು ಬಾತ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇರುವುದನ್ನು ಕಂಡಾಗ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಅದನ್ನು ಕಂಡು ಅಸಮಾಧಾನಗೊಂಡ ವಿದ್ಯಾರ್ಥಿನಿಯರು ಜೋರಾಗಿ ಕಿರುಚಿಕೊಂಡಿದ್ದಾರೆ ಮತ್ತು ಕ್ಯಾಮರಾಗಳನ್ನು ಮುರಿಯಲು ಪ್ರಾರಂಭಿಸಿದ್ದಾರೆ. ತದನಂತರ ವಿಷಯ ವಸತಿ ನಿಲಯದ ಎಲ್ಲ ವಿದ್ಯಾರ್ಥಿನಿಯರಿಗೂ ತಿಳಿದು ಗಲಾಟೆ ಪ್ರಾರಂಭವಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ನೋಯ್ಡಾದ ಸೆಕ್ಟರ್ 62ರಲ್ಲಿರುವ ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಶನ್ ವಿದ್ಯಾರ್ಥಿನಿಯರ ವಸತಿ ನಿಲಯ ಸ್ನಾನದ ಕೋಣೆಯಲ್ಲಿ ಸ್ಪೈ ಕ್ಯಾಮೆರಾಗಳು ಕಂಡುಬಂದಿದ್ದು, ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜ್ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಕುರಿತು ಪೋಲಿಸರಿಗೆ ತಿಳಿಸಿದ ವಿದ್ಯಾರ್ಥಿನಿಯರು ಕಾಲೇಜು ಎದುರುಗಡೆ ಧರಣಿ ಕುಳಿತಿದ್ದಾರೆ. ಕ್ಯಾಮರಾಗಳನ್ನು ವಶಪಡಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ವಸತಿ ನಿಲಯದ ಯುವತಿಯರ ಮತ್ತು ಸಿಬ್ಬಂದಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದರ ಮೂಲಕ ಕೃತ್ಯದ ಹಿಂದಿರುವ ಆರೋಪಿಗಳ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.