ಗಾಂಧಿ ನಗರ : ಕಾಲೇಜಿನ ಆವರಣದಲ್ಲಿ ಸ್ಯಾನಿಟರಿ ಪ್ಯಾಡ್ ಕಂಡುಬಂದ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಋತುಸ್ರಾವ ಆಗಿದೆಯೇ ಇಲ್ಲವೇ ಎಂದು ತಿಳಿಯಲು ಶಿಕ್ಷಕಿಯರು ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಪರೀಕ್ಷಿಸಿದ ಘಟನೆ ಗುಜರಾತ್ ನ ಕಛ್ ಜಿಲ್ಲೆಯ ಭುಜ್ ನ ಶ್ರೀ ಸಹಜಾನಂದ್ ಗರ್ಲ್ಸ್ ಇನ್ ಸ್ಟಿಟ್ಯೂಟ್ ನಲ್ಲಿ ನಡೆದಿದೆ.
ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮುಟ್ಟಿನ ವೇಳೆ ಹಾಸ್ಟೆಲ್ ಅಡುಗೆ ಮನೆ, ಆವರಣದಲ್ಲಿರುವ ದೇವಸ್ಥಾನಕ್ಕೆ ಹೀಗುವಂತಿಲ್ಲ. ಹಾಗೇ ಬೇರೆ ವಿದ್ಯಾರ್ಥಿಗಳ ಜೊತೆ ಬೆರೆಯುವಂತಿಲ್ಲ ಎಂಬ ನಿಯಮವಿದೆ. ಈ ಕಾರಣಕ್ಕೆ ವಿದ್ಯಾರ್ಥಿನಿಯರು ತಮಗೆ ಋತುಸ್ರಾವವಾದ ವಿಚಾರವನ್ನು ಮುಚ್ಚಿಡುತ್ತಿದ್ದರು.
ಆದರೆ ಕಾಲೇಜಿನ ಆವರಣದಲ್ಲಿ ಸ್ಯಾನಿಟರಿ ಪ್ಯಾಡ್ ಕಂಡುಬಂದ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಋತುಸ್ರಾವ ಆಗಿದೆಯೇ ಇಲ್ಲವೇ ಎಂದು ತಿಳಿಯಲು ಶಿಕ್ಷಕಿಯರು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಪರೀಕ್ಷಿಸಿದ್ದಾರೆ. ಅಲ್ಲದೇ ಪ್ರತಿಭಟನೆ ನಡೆಸಿದರೆ ಕಾಲೇಜಿನಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಗುಜರಾತ್ ರಾಜ್ಯ ಮಹಿಳಾ ಆಯೋಗ ಸಮಿತಿ ರಚಿಸಿ ವಿದ್ಯಾರ್ಥಿನಿಯರಿಂದ ಮಾಹಿತಿ ಕಲೆಹಾಕಿದ್ದು, ಈ ಘಟನೆಯ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.