ತಮಿಳುನಾಡಿನ ಡಿಎಂಕೆ ಪಕ್ಷದ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿಗೆ 94ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಸಾವಿರಾರು ಸಂಖ್ಯೆಯಲ್ಲಿ ಡಿಎಂಕೆ ಪಕ್ಷದ ನಾಯಕರು , ಕಾರ್ಯಕರ್ತರು ಅವರ ನಿವಾಸಕ್ಕೆ ಆಗಮಿಸಿ ಶುಭಕೋರಿದ್ದಾರೆ.
ಕರುಣಾನಿಧಿಯವರ ಜನ್ಮದಿನದೊಂದಿಗೆ ತಮಿಳುನಾಡು ವಿಧಾನಸಭೆ ಪ್ರವೇಶಿಸಿ 50 ವರ್ಷಗಳಾದ ಸಂಭ್ರಮ ಕೂಡಾ ಡಿಎಂಕೆ ಪಕ್ಷದ ಕಾರ್ಯಕರ್ತರು ಆಚರಿಸುತ್ತಿದ್ದಾರೆ.
ಏತನ್ಮಧ್ಯೆ, ವೈದ್ಯರ ಸಲಹೆ ಮೇರೆಗೆ ಅನಾರೋಗ್ಯದಿಂದಾಗಿ ಕರುಣಾನಿಧಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕರುಣಾನಿಧಿಯವರ ಪುತ್ರ, ಡಿಎಂಕೆ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ತಂದೆ ವಾಸವಾಗಿರುವ ಗೋಪಾಲಪುರಂ ನಿವಾಸಕ್ಕೆ ತೆರಳಿ ಶುಭಕೋರಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ಇತರ ಹಿರಿಯ ನಾಯಕರು ಕರುಣಾನಿಧಿಯವರಿಗೆ ಶುಭಹಾರೈಸಿದ್ದಾರೆ.
ಡಿಎಂಕೆ ಪಕ್ಷದಿಂದ ಬೃಹತ್ ಸಾರ್ವಜನಿಕ ಸಭೆಯನ್ನು ಇಂದು ಸಂಜೆ ಆಯೋಜಿಸಲಾಗಿದ್ದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಿಹಾರ್, ಓರಿಸ್ಸಾ, ಪುದುಚೇರಿ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್, ನವೀನ್ ಪಟ್ನಾಯಕ್ ಮತ್ತು ವಿ.ನಾರಾಯಣ್ ಸ್ವಾಮಿ ಮತ್ತು ಸಿಪಿಐ ಪಕ್ಷದ ಕಾರ್ಯದರ್ಶಿ ಡಿ.ರಾಜಾ, ಸಿಪಿಐ-ಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಸೇರಿದಂತೆ ಅನೇಕ ಗಣ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.