ಸಕಾರಣವಿಲ್ಲದೇ ದೀರ್ಘಾವಧಿಗೆ ಪತಿಯೊಂದಿಗೆ ಸೆಕ್ಸ್ ನಿರಾಕರಣೆ ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಮತ್ತು ಈ ನೆಲೆಯ ಮೇಲೆ ಪತಿ ವಿಚ್ಛೇದನವನ್ನು ಪಡೆದುಕೊಳ್ಳಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತನ್ನ ಪತ್ನಿ ಕಳೆದ ನಾಲ್ಕುವರೆ ವರ್ಷಗಳಿಂದ ಲೈಂಗಿಕ ಸಂಬಂಧಕ್ಕೆ ನಿರಾಕರಿಸುತ್ತಲೇ ಬಂದಿದ್ದಾಳೆ. ಈ ಮೂಲಕ ಮಾನಸಿಕ ಕ್ರೌರ್ಯತೆಯನ್ನು ಮೆರೆದಿದ್ದಾಳೆ. ಅವಳು ಯಾವುದೇ ರೀತಿಯ ದೈಹಿಕ ನ್ಯೂನತೆಯನ್ನು ಹೊಂದಿಲ್ಲ. ಆದರೂ ಈ ರೀತಿಯಲ್ಲಿ ವರ್ತಿಸುತ್ತಿದ್ದಾಳೆ. ಹೀಗಾಗಿ ಅವಳಿಂದ ನನಗೆ ವಿಚ್ಛೇದನ ಬೇಕು ಎಂದು ವ್ಯಕ್ತಿಯೊಬ್ಬ ಕೋರ್ಟ್ ಮೊರೆ ಹೋಗಿದ್ದ.
ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನೊಂದ ಪತಿಗೆ ವಿಚ್ಛೇದನ ಪಡೆಯಲು ಅನುಮತಿ ನೀಡಿದೆ.
ಸಂಭೋಗವನ್ನು ನಿರಾಕರಿಸುವುದರ ಮೂಲಕ ಪತ್ನಿ ಪತಿಗೆ ಮಾನಸಿಕ ಹಿಂಸೆ ನೀಡಿದ್ದಾಳೆ ಎಂಬುದು ಸ್ಪಷ್ಟವಾಗುತ್ತದೆ. ಒಂದೇ ಸೂರಿನ ಕೆಳಗಿದ್ದು, ಯಾವುದೇ ರೀತಿಯ ದೈಹಿಕ ದೌರ್ಬಲ್ಯ ಹೊಂದಿರದಿದ್ದರೂ, ತರ್ಕಬದ್ಧ ಕಾರಣವಿಲ್ಲದೇ ಪತಿಯನ್ನು ದೂರವಿಟ್ಟಿರುವುದು ಸಮಂಜಸವಲ್ಲ ಎಂದು ನ್ಯಾಯಮೂರ್ತಿಗಳಾದ ಪ್ರದೀಪ್ ನಂದ್ರಜೋಗ್ ಮತ್ತು ಪ್ರತಿಭಾ ರಾಣಿಯವರನ್ನೊಳಗೊಂಡ ಪೀಠ ಹೇಳಿದೆ.
ಹರಿಯಾಣದ ಈ ದಂಪತಿಗೆ 2010ರಲ್ಲಿ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ