ದೆಹಲಿ ಲಿಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ "ಮೊದಲ ಪ್ರೀತಿ ಶಿಕ್ಷಣ" ಕ್ಷೇತ್ರಕ್ಕೆ ಮರಳಲು ಬಯಸಿರುವುದಾಗಿ ಅವರು ಹೇಳಿದ್ದಾರೆ.
ಅಧಿಕಾರಾವಧಿ ಮುಗಿಯುವ ಮುನ್ನವೇ ಅವರು ರಾಜೀನಾಮೆ ಸಲ್ಲಿಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಈ ಕುರಿತು ಕೆಲವು ತಿಂಗಳಿಂದಲೇ ಯೋಚಿಸುತ್ತಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರು ಉಪನ್ಯಾಸ ವೃತ್ತಿಗೆ ಮರಳುತ್ತಾರೆ ಎಂದು ಹೇಳಲಾಗುತ್ತಿದೆ.
2013 ಜುಲೈನಿಂದ ಅಧಿಕಾರ ವಹಿಸಿಕೊಂಡಿದ್ದ ಜಂಗ್ ಇಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಅವರ18 ತಿಂಗಳ ಅಧಿಕಾರಾವಧಿ ಬಾಕಿ ಇತ್ತು.
ಅಧಿಕಾರವಾಧಿಯಲ್ಲಿ ತಮಗೆ ಸಹಕಾರ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಂಗ್ ಕೃತಜ್ಞತೆಗಳನ್ನು ಹೇಳಿದ್ದಾರೆ.
ಜತೆಗೆ ಒಂದು ವರ್ಷದ ರಾಷ್ಟ್ರಪತಿ ಆಡಳಿತದ ಸಮಯದಲ್ಲಿ ತಮಗೆ ತೋರಿಸಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕಾಗಿ ಅವರು ದೆಹಲಿ ವಾಸಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಅಧಿಕಾರದಲ್ಲಿದ್ದಷ್ಟು ದಿನ ಕೇಜ್ರಿವಾಲ್ ಜತೆಗಿನ ಜಟಾಪಟಿಯಿಂದಲೇ ಅವರು ಹೆಚ್ಚು ಸುದ್ದಿಯಲ್ಲಿದ್ದರು. ಕೇಜ್ರಿ ಜಂಗ್ ಸಂಬಂಧ ಹಾವು ಮುಂಗುಸಿಯಂತಿದ್ದು, ಜಂಗ್ ಕೇಂದ್ರದ ಏಜೆಂಟ್‌ನಂತೆ ವರ್ತಿಸುತ್ತಾರೆ ಎಂದು ಕೇಜ್ರಿವಾಲ್ ಸದಾ ಆರೋಪಿಸುತ್ತಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.