ಚಾಲಕನೋರ್ವ 4 ವರ್ಷದ ಮಗುವಿಗೆ ಅಪಘಾತ ಮಾಡಿದ್ದಲ್ಲದೇ , ಸಕಾಲಕ್ಕೆ ಚಿಕಿತ್ಸೆ ಕೊಡಿಸದೇ ಆತನ ಸಾವಿಗೂ ಕಾರಣನಾದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.
ಶುಕ್ರವಾರ ಈ ಹೇಯ ಕೃತ್ಯ ನಡೆದಿದ್ದು ಮೃತನನ್ನು ಇಂದಿರಾ ವಿಕಾಸ್ ಕಾಲೋನಿ ನಿವಾಸಿ ರೋಹಿತ್ ಎಂದು ಗುರುತಿಸಲಾಗಿದೆ.
ಬಾಲಕ ಮನೆ ಮುಂದೆ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ ಕ್ಯಾಬ್ ಒಂದು ಟರ್ನ್ ಹೊಡೆಯುವ ಸಮಯದಲ್ಲಿ ಆತನಿಗೆ ಗುದ್ದಿದೆ. ತಕ್ಷಣ ನೂರಾರು ಜನರು ನೆರೆದಿದ್ದು, ಕ್ಯಾಬ್ ಚಾಲಕ 32 ವರ್ಷದ ರಾಹುಲ್ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯವುದಾಗಿ ಹೇಳಿ ಮಗು ಮತ್ತು ಆತನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತೇನೆ ಎಂದು ಪುಸಲಾಯಿಸಿ ಕರೆದೊಯ್ದಿದ್ದಾನೆ.
ಆದರೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿನ ಜೀವ ಉಳಿಸುವುದಕ್ಕಿಂತ ತಾನು ಜೈಲು ಪಾಲಾಗಿ ಬಿಡುತ್ತೇನೆ ಎಂಬ ಭಯ ಆತನನ್ನಾವರಿಸಿದೆ, ಅಂತಹ ದೀನ ಸ್ಥಿತಿಯಲ್ಲಿರುವ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯದೆ ಬರೊಬ್ಬರಿ 5 ತಾಸು ನಗರದಲ್ಲಿಯೇ ಸುತ್ತಿಸಿದ್ದಾನೆ. ಐದಾರು ಆಸ್ಪತ್ರೆ ಒಳಕ್ಕೆ ಹೋಗಿ ಬಂದ ಆತ ಯಾರು ಕೂಡ ಮಗುವನ್ನು ದಾಖಲಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ನೊಂದ ತಾಯಿಯ ಬಳಿ ಸುಳ್ಳು ಹೇಳಿದ್ದಾನೆ.
ಆತ ಮಗುವನ್ನು ಆಸ್ಪತ್ರೆಗೆ ಸೇರಿಸುವುದಿಲ್ಲ ಎಂದು ಸ್ಪಷ್ಟವಾದಾಗ ಮಗುವಿನ ತಾಯಿ ತನ್ನ ಪತಿಗೆ ಕರೆ ಮಾಡಿ ಎಲ್ಲ ವಿಷಯವನ್ನು ತಿಳಿಸಿದ್ದಾಳೆ. ಅಷ್ಟರಲ್ಲಿ ಮಗು ಮೃತ ಪಟ್ಟಿದೆ.
ಆರೋಪಿ ರಾಹುಲ್ ರಾಕ್ಷಸೀತನ ಅಲ್ಲಿಗೆ ಮುಗಿದಿಲ್ಲ. ನನ್ನ ವಿರುದ್ಧ ದೂರು ನೀಡಿದರೆ ಇದೇ ಕ್ಯಾಬ್‌ನಲ್ಲಿ ಲಾಕ್ ಮಾಡಿ ಸಾಯಿಸುವುದಾಗಿ ಆತ ಮೃತ ಮಗುವಿನ ತಾಯಿಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.