ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಗುವಾಹಟಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ವಿಚಾರಣೆ ಮುಗಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನ್ನಾಡುತ್ತಿದ್ದ ರಾಹುಲ್, ನಾನು ಬಡವರ ಪರವಾಗಿ ಮಾತನಾಡುತ್ತೇನೆ ಎಂದು ನನ್ನನ್ನು ಗುರಿಯಾಗಿಸಲಾಗಿದೆ. ದೇಶವನ್ನು ವಿಭಜಿಸುವ ಆರ್‌ಎಸ್ಎಸ್ ವಿರುದ್ಧ ನಾನು ಹೋರಾಡುತ್ತೇನೆ ಎಂದಿದ್ದಾರೆ.
ಆರ್‌ಎಸ್ಎಸ್ ಕಾರ್ಯಕರ್ತರೊಬ್ಬರು ಕಳೆದ ವರ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಹಲವು ಸಾಕ್ಷ್ಯಿಗಳನ್ನು ವಿಚಾರಣೆಗೊಳಪಡಿಸಿದ ಬಳಿಕ ಕೋರ್ಟ್ ಸೆಪ್ಟೆಂಬರ್ 29 ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಸೂಚಿಸಿದ್ದರು.
ಏನಿದು ಪ್ರಕರಣ:
ಕಳೆದ ವರ್ಷ ಆಸ್ಸಾಂನ ಬರ್ಪೆಟಾ ಸತ್ರಾಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ರೋಡ್ ಶೋನಲ್ಲಿ ಪಾಲ್ಗೊಳ್ಳುವ ಮುನ್ನ 16 ಶತಮಾನಕ್ಕೆ ಸೇರಿದ ವೈಷ್ಣವ ದೇವಾಲಯಕ್ಕೆ ಭೇಟಿ ನೀಡಬೇಕಿತ್ತು. ಆದರೆ ದೇವಸ್ಥಾನಕ್ಕೆ ಭೇಟಿ ನೀಡದೆ ರಾಹುಲ್ ನೇರವಾಗಿ ರೋಡ್ ಶೋ ನಡೆಸಲು ತೆರಳಿದ್ದರು.
ಅಲ್ಲಿಂದ ನವದೆಹಲಿಗೆ ಹಿಂತಿರುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನ್ನಾಡುತ್ತಿದ್ದ ರಾಹುಲ್, ಸ್ಥಳೀಯ ಮಹಿಳೆಯರನ್ನು ಬಳಸಿಕೊಂಡು ಆರ್‌ಎಸ್ಎಸ್ ಕಾರ್ಯಕರ್ತರು ನನ್ನನ್ನು ದೇವಸ್ಥಾನದ ಒಳಗೆ ಹೋಗದಂತೆ ತಡೆದರು ಎಂದು ಆರೋಪಿಸಿದ್ದರು.
ಆದರೆ ರಾಹುಲ್ ಆರೋಪದಲ್ಲಿ ಹುರುಳಿಲ್ಲ. ಈ ಮೂಲಕ ರಾಹುಲ್ ಸಂಘಕ್ಕೆ ಮತ್ತು ದೇವಸ್ಥಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಂಘದ ಕಾರ್ಯಕರ್ತನೊಬ್ಬ ಕೋರ್ಟ್ ಮೆಟ್ಟಿಲೇರಿದ್ದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ