ಡಿಸೆಂಬರ್ ತಿಂಗಳು ತಮಿಳುನಾಡಿನ ಪಾಲಿಗೆ ಸದಾ ಅಪಶಕುನವಾಗಿ ಕಾಡುತ್ತದೆ ಎನ್ನಿಸುತ್ತದೆ. ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಒಂದಲ್ಲ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಎಐಡಿಎಂಕೆ ನಾಯಕಿ, ರಾಜ್ಯದ ಜನರ ಪಾಲಿನ ಅಮ್ಮ ಎಂದೇ ಗುರುತಿಸಿಕೊಳ್ಳುವ ಜೆ. ಜಯಲಲಿತಾ ಸಾವಿನೊಂದಿಗೆ ಇದು ಮತ್ತೊಮ್ಮೆ ಸಾಬೀತಾಗಿದೆ.
ತಮಿಳುನಾಡಿನ ಅನೇಕ ಪ್ರಸಿದ್ಧ ನಾಯಕರು ಇದೇ ತಿಂಗಳಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೀಗ ಜಯಾ ಕೂಡ ಆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿ, ಕೇಂದ್ರ ಗೃಹ ಸಚಿವ, ಭಾರತದ ಕೊನೆಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ 1972, ಡಿಸೆಂಬರ್ 25ರಂದು ಮರಣವನ್ನಪ್ಪಿದ್ದರು. ದ್ರಾವಿಡ ಚಳವಳಿ ನಾಯಕ 'ಪೆರಿಯಾರ' ಇ.ವಿ ರಾಮಸ್ವಾಮಿ ಡಿಸೆಂಬರ್ 24, 1972ರಲ್ಲಿ ಗತಿಸಿದ್ದರು. ಇಬ್ಬರಿಗೂ 94 ವರ್ಷ ವಯಸ್ಸಾಗಿದ್ದು ಧೀರ್ಘಕಾಲ ಕಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದರು.
ಜಯಲಲಿತಾ ರಾಜಕೀಯ ಗುರು, ನಟ ಪರಿವರ್ತಿತ ರಾಜಕಾರಣಿ ಎಂಜಿಆರ್ ಸಾವನ್ನಪ್ಪಿದ್ದು ಕೂಡ ಡಿಸೆಂಬರ್ ತಿಂಗಳಲ್ಲಿಯೇ. 1987, ಡಿಸೆಂಬರ್ 24 ರಂದು ಮುಖ್ಯಮಂತ್ರಿಯಾಗಿದ್ದಾಗಲೇ ಅವರು ಕೊನೆಯುಸಿರೆಳೆದಿದ್ದರು. ಮತ್ತೀಗ ದುರಂತ ಕಾಕತಾಳೀಯ ಎಂಬಂತೆ ಅವರ ಶಿಷ್ಯೆ ಜಯಲಲಿತಾ ಕೂಡ ಇದೇ ತಿಂಗಳಲ್ಲಿ ಸಾವನ್ನಪ್ಪಿದ್ದಾರೆ.
ಪ್ರಕೃತಿ ಕೂಡ ಈ ತಿಂಗಳಲ್ಲಿ ಚೆನ್ನೈ ಪಾಲಿಗೆ ಯಮಸದೃಶವಾಗಿ ಕಾಡಿದೆ. 2004 ಡಿಸೆಂಬರ್ 26 ರಂದು ಚೆನ್ನೈ ಕಡಲ ತಡಿಗೆ ಅಪ್ಪಳಿಸಿದ ಸುನಾಮಿ ನೂರಾರು ಜನರನ್ನು ಬಲಿ ಪಡೆದಿತ್ತು.
ಇನ್ನು ಭಾರಿ ಮಳೆಯಿಂದಾಗಿ ಚೆನ್ನೈ ಪ್ರವಾಹ ಪರಿಸ್ಥಿತಿ ಎದುರಿಸಿದ್ದೂ ಕಳೆದ ವರ್ಷ ಡಿಸೆಂಬರ್ 14ರಂದು.ಇದೀಗ, ತಮಿಳರ ಆರಾಧ್ಯ ದೈವ ಜಯಲಲಿತಾ ನಿಧನ, ತಮಿಳರ ಪಾಲಿಗೆ ಡಿಸೆಂಬರ್ ಶೋಕಸಾಗರದಲ್ಲಿ ಮುಳುಗಿಸಿದೆ.
ಕಳೆದ ವರ್ಷ ಡಿಸೆಂಬರ್ ಮೊದಲ ವಾರ ಎದುರಾಗಿದ್ದ ಮಹಾಪ್ರವಾಹ ಚೆನ್ನೈ, ಕಾಂಚೀಪುರಮ್, ಕಡಲೂರು, ತಿರುವಳ್ಳೂರು, ತೂತುಕುಡಿಯನ್ನು ಸಾಕಷ್ಟು ನಲುಗಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.