ನವದೆಹಲಿ: ಇನ್ನು ಮುಂದೆ ಮುಸ್ಲಿಂ ಮಹಿಳೆಯರು ತಲೆಕೂದಲಿಗೆ ಕತ್ತರಿ ಹಾಕುವಂತಿಲ್ಲ. ಐಬ್ರೋ ಶೇಪ್ ಮಾಡಿಸುವಂತಿಲ್ಲ ಎಂದು ಉತ್ತರ ಪ್ರದೇಶ ಇಸ್ಲಾಮಿಕ್ ಉನ್ನತ ಶಿಕ್ಷಣ ಸಂಸ್ಥೆ ದರುಲ್ ಉಲೂಮ್ ದಿಯೋಬಂದ್ ಫತ್ವಾ ಹೊರಡಿಸಿದೆ.
ತಲೆಗೂದಲು ಕತ್ತರಿಸುವುದು ಮತ್ತು ಐಬ್ರೋ ಶೇಪ್ ಮಾಡಿಸುವುದು ಮುಸ್ಲಿಂ ಧರ್ಮದ ಪ್ರಕಾರ ತಪ್ಪು. ಹೀಗಾಗಿ ಹುಬ್ಬನ್ನು ಆಕಾರಗೊಳಿಸುವುದು, ತೆಗೆಯುವುದು ಇತ್ಯಾದಿ ಮಾಡಬಾರದು ಎಂದಿದೆ. ನನ್ನ ಪತ್ನಿಗೆ ಐಬ್ರೋ ಶೇಪ್ ಮಾಡಿಸಲು ಮತ್ತು ತಲೆ ಕೂದಲು ಕತ್ತರಿಸಲು ಅವಕಾಶವಿದೆಯೆ..? ಮುಸ್ಲಿಂ ಧರ್ಮದ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎಂದು ಸಹರಾನ್ಪುರದ ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದರು. ಈ ಹಿನ್ನೆಲೆ ಹೊಸ ಫತ್ವಾ ಹೊರಡಿಸಲಾಗಿದೆ.
ಒಂದು ವೇಳೆ ಮುಸಲ್ಮಾನ ಮಹಿಳೆಯರು ಹೀಗೆ ಮಾಡಿದರೆ ಅದು ಮುಸ್ಲಿಂ ಕಾನೂನು ಉಲ್ಲಂಘನೆ ಎಂದು ಫತ್ವಾದಲ್ಲಿ ಸೂಚಿಸಲಾಗಿದೆ. ಆದರೆ ಈ ಫತ್ವಾಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.