ಇಂದು ಎಐಡಿಎಂಕೆ ಪಕ್ಷದ ನಿರ್ಣಾಯಕ ಸಭೆ ನಡೆಯಲಿದ್ದು, ಪನ್ನೀರ್ ಸೆಲ್ವಂ ಅವರ ಸ್ಥಾನಕ್ಕೆ ಶಶಿಕಲಾ ಅವರನ್ನೇರಿಸುವ ಸಾಧ್ಯತೆಗಳು ದಟ್ಟವಾಗಿವೆ. ಜಯಲಲಿತಾ ನಿಧನದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದ್ದ ಶಶಿಕಲಾ ಮುಖ್ಯಮಂತ್ರಿ ಸ್ಥಾನಕ್ಕೇರುತ್ತಿರುವುದು ನಿರೀಕ್ಷಿತ ಬೆಳವಣಿಗೆ.
ತಮಿಳುನಾಡು ಮುಖ್ಯಮಂತ್ರಿಯಾಗಿ ಸೋಮವಾರ ಚಿನ್ನಮ್ಮ ಅಧಿಕಾರ ಸ್ವೀಕಾರ..?
ಪಕ್ಷದ ಕೆಲ ಮೂಲಗಳ ಪ್ರಕಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪನ್ನೀರ್ ಸೆಲ್ವಂ ಶಶಿಕಲಾ ಅವರ ಹಾದಿಯನ್ನು ಸುಗಮಗೊಳಿಸಲಿದ್ದಾರೆ. ಬಂದಿರುವ ಮಾಹಿತಿಗಳಲ್ಲಿ ನಿಜಾಂಶವಿದ್ದಲ್ಲಿ ಫೆಬ್ರವರಿ 8 ಅಥವಾ 9 ರಂದು ಶಶಿಕಲಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕೆಲವು ವರದಿಗಳ ಪ್ರಕಾರ ಜನವರಿ ತಿಂಗಳಲ್ಲಿಯೇ ಶಶಿಕಲಾ ಮುಖ್ಯಮಂತ್ರಿ ಸ್ಥಾನಕ್ಕೇರಬೇಕಿತ್ತು. ಆದರೆ ರಾಜ್ಯದಲ್ಲಿ ಜಲ್ಲಿಕಟ್ಟುಗಾಗಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದರಿಂದ ಈ ಬೆಳವಣಿಗೆಗೆ ಬ್ರೇಕ್ ಬಿದ್ದಿತ್ತು.
ತಮಿಳುನಾಡಿನ ರಾಜಕೀಯದಲ್ಲಿ ಕಳೆದೆರಡು ದಿನಗಳಿಂದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು ಜಯಲಲಿತಾ ಆಪ್ತೆ, ತಮಿಳುನಾಡು ಸರ್ಕಾರದ ಹಿರಿಯ ಸಲಹೆಗಾರರಾಗಿದ್ದ ಶೀಲಾ ಬಾಲಕೃಷ್ಣನ್ (62) ಶುಕ್ರವಾರ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ.
ಮುಖ್ಯಮಂತ್ರಿಯ ಕಾರ್ಯದರ್ಶಿಗಳಾಗಿದ್ದ, ಜಯಾ ಆವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಕೆ.ಎನ್ ವೆಂಕಟರಮಣನ್, ಎ ರಾಮಲಿಂಗಮ್ ಅವರಿಗೂ ಗೇಟ್ ಪಾಸ್ ನೀಡಲಾಗಿದೆ. ಇವರಿಬ್ಬರಿಗೆ ಸ್ಥಾನ ತ್ಯಜಿಸುವಂತೆ ಸರ್ಕಾರದ ಕಡೆಯಿಂದಲೇ ಸೂಚಿಸಲಾಗಿದೆ ಎಂದು ಮಾಹಿತಿ ದೊರೆತಿದೆ.
ಈ ಮೂವರು ಅಧಿಕಾರಿಗಳ ಅನೌಪಚಾರಿಕ ನಿರ್ಗಮನವನ್ನು ಪ್ರಸ್ತುತ ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯದ ಫಲಿತಾಂಶ ಎಂಬಂತೆ ನೋಡಲಾಗುತ್ತಿದ್ದು, ಶಶಿಕಲಾ ಪಟ್ಟಕ್ಕೇರುವ ಮುನ್ನ ಇವರೆಲ್ಲರನ್ನು ಅಧಿಕಾರದಿಂದ ಕಿತ್ತೆಸೆಯಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ