ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಯ ಆಕ್ರೋಶದ ಅರಿವಿಲ್ಲದೇ ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಾ ಪಾಕಿಸ್ತಾನಕ್ಕೆ ಸಲಹೆ ನೀಡುತ್ತಿದ್ದಾರೆ. ಮುಂದಿನ ಬಾರಿ ಪಾಕ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್ ತಿವಾರಿ ಮಾತನಾಡಿ, ಕೋಝಿಕ್ಕೋಡ್‌ನಲ್ಲಿ ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ಅಕಸ್ಮಿಕ ತಿರುವು ಪಡೆದುಕೊಂಡು ಪಾಕ್ ಜನತೆಗೆ ಅಭಿವೃದ್ಧಿ ಕುರಿತಂತೆ ಉಪದೇಶ ಮಾಡಲು ಆರಂಭಿಸಿರುವುದು ದೇಶದ ಜನತೆಗೆ ಆಘಾತ ಮೂಡಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರದಂದು ಕೋಝಿಕ್ಕೋಡ್‌ನಲ್ಲಿ ಆಯೋಜಿಸಲಾದ ಬಿಜೆಪಿ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಡತನ, ನಿರುದ್ಯೋಗದ ವಿರುದ್ಧ ಪಾಕಿಸ್ತಾನ ಯುದ್ಧ ಮಾಡಲಿ ಎಂದು ಸವಾಲ್ ಹಾಕಿದ್ದರು.
ಭಾರತ ಯುದ್ಧಕ್ಕೆ ಸಿದ್ದವಾಗಿದೆ. ಬಡತನದ ವಿರುದ್ಧ ಯುದ್ಧಕ್ಕೆ ಸಿದ್ದವಾಗಿದೆ. ಉಭಯ ದೇಶಗಳು ಬಡತನ, ನಿರುದ್ಯೋಗದ ವಿರುದ್ಧ ಹೋರಾಟ ಮಾಡಲಿ. ಯಾರು ಗೆಲ್ಲುತ್ತಾರೋ ನೋಡೋಣ ಎಂದು ಕಿಡಿಕಾರಿದ್ದರು.
ಶಿಕ್ಷಣ ಸೇರಿದಂತೆ ಹಲವಾರು ವಿಷಯಗಳ ಕುರಿತಂತೆ ಉಭಯ ದೇಶಗಳು ಹೋರಾಟ ನಡೆಸಬೇಕಾಗಿದೆ. ಈ ಹೋರಾಟದಲ್ಲಿ ಯಾರು ಗೆಲ್ಲುತ್ತಾರೋ ನೋಡೋಣ ಎಂದು ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಸಲಹೆ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ