ಚೆನ್ನೈ : ಕಳೆದ 10 ವರ್ಷಗಳಿಂದ ಹೆತ್ತ ತಾಯಿಯನ್ನೇ ಮಕ್ಕಳಿಬ್ಬರು ಕೂಡಿ ಹಾಕಿದ್ದರು. ಇದೀಗ ಸಮಾಜ ಕಲ್ಯಾಣ ಇಲಾಖೆ ಮಹಿಳೆಯನ್ನು ರಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
62 ವರ್ಷದ ಮಹಿಳೆಯ ಇಬ್ಬರು ಪುತ್ರರು ಬೇರೆಡೆ ವಾಸಿಸುತ್ತಿದ್ದು, ಆಕೆಗೆ ಆಹಾರ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಆಹಾರ ಇಲ್ಲದಿದ್ದಾಗ ಆಕೆ ಕೂಗುತ್ತಿದ್ದಳು. ಈ ವೇಳೆ ನೆರೆಹೊರೆಯವರು ಬೀಗ ಹಾಕಿದ ಮನೆಗೆ ಬಿಸ್ಕೆಟ್ ಅಥವಾ ಹಣ್ಣುಗಳನ್ನು ಕಿಟಕಿ ಮೂಲಕ ಎಸೆಯುತ್ತಿದ್ದರು.
ನೆರೆಹೊರೆಯವರಿಗೆ ಆಕೆಯ ಪರಿಸ್ಥಿತಿ ತಿಳಿದಿದ್ದರೂ. ಮಹಿಳೆ ಎಂದಿಗೂ ಯಾರೊಟ್ಟಿಗೂ ಕೂಡ ತನ್ನ ಇಬ್ಬರು ಪುತ್ರರ ವಿವರಗಳನ್ನು ಹಂಚಿಕೊಳ್ಳಲು ಧೈರ್ಯ ಮಾಡಿರಲಿಲ್ಲ. ಆದರೆ ಓರ್ವ ಪುತ್ರ ಪೊಲೀಸ್ ಆಗಿ ಹಾಗೂ ಮತ್ತೋರ್ವ ಪುತ್ರ ಕೇಂದ್ರ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರು.
ಸದ್ಯ ಮಹಿಳೆಯ ಕಷ್ಟ ಪಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಕೆಯನ್ನು ರಕ್ಷಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಯಿತು.
ಮನೆಯ ಕೀಲಿ ಕೈ ನೀಡಲು ಮಹಿಳೆಯ ಪುತ್ರರು ನಿರಾಕರಿಸಿದ್ದರಿಂದ ಪೊಲೀಸರ ನೆರವಿನೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಮನೆಗೆ ನುಗ್ಗಿ ವೃದ್ಧೆಯನ್ನು ರಕ್ಷಿಸಿದ್ದಾರೆ.