ಹೊಸದಿಲ್ಲಿ: ಸುಪ್ರೀಂಕೋರ್ಟ್‌ನಲ್ಲಿ ಮರು ವಿನ್ಯಾಸಗೊಳಿಸಿರುವ ನ್ಯಾಯದೇವತೆಯ ಪ್ರತಿಮೆಯನ್ನು ಇಂದು ಅನಾವರಣ ಮಾಡಲಾಗಿದ್ದು, ಈ ಹಿಂದೆ ನ್ಯಾಯದೇವತೆ ಕಣ್ಣಿಗೆ ಕಟ್ಟಿದ್ದ ಕಪ್ಪು ಪಟ್ಟಿಯನ್ನು ತೆಗೆಯಲಾಗಿದೆ.
ಸುಪ್ರೀಂ ಕೋರ್ಟ್ ಆವರಣದಲ್ಲಿ ನ್ಯಾಯಮೂರ್ತಿಗಳ ಅಧ್ಯಯನಕ್ಕೆ ಮೀಸಲಿರುವ ಗ್ರಂಥಾಲಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟದೇ ಇರುವ ಹಾಗೂ ಕೈಯಲ್ಲಿ ಕತ್ತಿಯ ಬದಲಿಗೆ ಸಂವಿಧಾನ ಹಿಡಿದಿರುವ ಹೊಸ ನ್ಯಾಯದೇವತೆಯ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಆದರೆ ಈ ಹಿಂದೆಯಿದ್ದ ತಕ್ಕಡಿಯಬನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಸಿಜೆಐ ಡಿ. ವೈ. ಚಂದ್ರಚೂಡ್ ಅವರ ನೇತೃತ್ವದಲ್ಲಿ ನ್ಯಾಯದೇವತೆ ಪ್ರತಿಮೆಯ ಕಲ್ಪನೆಯನ್ನು ಮರುವಿನ್ಯಾಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ವಸಾಹತುಶಾಹಿ ಪರಂಪರೆಯನ್ನು ದಾಟಿ ಮುಂದುವರಿಯುವ ಅಗತ್ಯ ಈಗ ಎದುರಾಗಿದೆ. ಭಾರತದಲ್ಲಿ ಸಂವಿಧಾನದ ಅನುಸಾರವೇ ನ್ಯಾಯ ವಿತರಣೆಯಾಗಲಿದೆ. ಕಾನೂನು ಕುರುಡಲ್ಲ, ಅದು ಎಲ್ಲರಿಗೂ ಸಮಾನ ಎಂಬ ಸಂದೇಶ ರವಾನಿಸುವುದು ನ್ಯಾಯದೇವತೆ ಪ್ರತಿಮೆ ಮರುವಿನ್ಯಾಸದ ಹಿಂದಿನ ಉದ್ದೇಶವಾಗಿದೆ ಎಂದು ವರದಿಯಾಗಿದೆ.
ಕಾನೂನಿನ ಮುಂದೆ ಎಲ್ಲರಿಗೂ ಸಮಾನ ನ್ಯಾಯ ಎನ್ನುವ ಸಂಕೇತವನ್ನು ಸಾರುವ ಸಲುವಾಗಿ ನ್ಯಾಯದೇವತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಲಾಗಿತ್ತು. ಇದೀಗ ಕಾನೂನು ಕುರುಡಲ್ಲ. ಪ್ರತಿಯೊಬ್ಬರನ್ನೂ ಅದು ನೋಡುವಂತಾಗಬೇಕು. ವಸಾಹತುಶಾಹಿ ಕಾನೂನುಗಳ ಹಿನ್ನೆಲೆಯಲ್ಲಿ ನ್ಯಾಯದಾನ ಮಾಡುವುದು ಸಮರ್ಪಕವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.