ನವದೆಹಲಿ: ತ್ರಿವಳಿ ತಲಾಖ್ ನಿಷೇಧ ವಿಚಾರ ಸದ್ಯಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು ತೀರ್ಪು ಬರುವುದೊಂದೇ ಬಾಕಿ. ಜುಲೈಗೆ ತೀರ್ಪು ಕಾದಿರಿಸಲಾಗಿದ್ದು, ಅಲ್ಲಿ ತ್ರಿವಳಿ ತಲಾಖ್ ಪದ್ಧತಿ ನಿಷೇಧವಾಗದಿದ್ದರೆ ಕೇಂದ್ರವೇ ಮಧ್ಯಪ್ರವೇಶಿಸಲಿದೆ ಎಂದು ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
‘ಇದೊಂದು ಸಮುದಾಯಕ್ಕೆ ಸಂಬಂಧಪಟ್ಟ ವಿಷಯ. ಅದುವೇ ನ್ಯಾಯಯುತವಾಗಿ ತೀರ್ಮಾನ ಕೈಗೊಂಡರೆ ಸರಿ. ಇಲ್ಲದಿದ್ದರೆ, ಸರ್ಕಾರವೇ ಮಧ್ಯ ಪ್ರವೇಶಿಸಿ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ಜಾರಿಗೆ ತರಲು ಹಿಂಜರಿಯುವುದಿಲ್ಲ’ ಎಂದಿದ್ದಾರೆ.
‘ಇದು ಯಾವುದೇ ವ್ಯಕ್ತಿಗಳ ವೈಯಕ್ತಿಕ ಜೀವನದಲ್ಲಿ ತಲೆ ಹಾಕುವ ಪ್ರಶ್ನೆಯಲ್ಲ. ಸಮಾಜದಲ್ಲಿ ಆ ಸಮುದಾಯದ ಮಹಿಳೆಯರೂ ಸಮಾನರಾಗಿ ಬದುಕಬೇಕು’ ಎಂದು ವೆಂಕಯ್ಯ ನಾಯ್ಡು ಸ್ಪಷ್ಟನೆ ನೀಡಿದ್ದಾರೆ.
ಹಿಂದೂ ಧರ್ಮದಲ್ಲಿದ್ದ ಸತಿ ಸಹಗಮನ ಪದ್ಧತಿಯ ನಿಷೇಧ ಹಾಗೂ, ವಿಧವಾ ವಿವಾಹ ಪದ್ಧತಿಯ ಆರಂಭ ಸಂಸತ್ತಿನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಹಾಗಿರುವಾಗ ಇತರ ಸಮುದಾಯಗಳಲ್ಲಿರುವ ಅನಿಷ್ಠ ಪದ್ಧತಿಗಳನ್ನು ನಿಷೇಧಿಸಲು ಹಿಂಜರಿಕೆಯೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ