ನವದೆಹಲಿ: ರೈತ ಪ್ರತಿಭಟನೆ ಬಗ್ಗೆ ಸುಳ್ಳು ಮಾಹಿತಿ, ಪ್ರಚೋದನಕಾರಿ ಟ್ವೀಟ್ ಮಾಡುತ್ತಿದ್ದ ಖಾತೆಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಟ್ವಿಟರ್ ಸಂಸ್ಥೆಗೆ ಸೂಚನೆ ನೀಡಿತ್ತು. ಆದರೆ ಇದನ್ನು ಟ್ವಿಟರ್ ಧಿಕ್ಕರಿಸಿರುವುದು ಕೇಂದ್ರ ಮತ್ತು ಟ್ವಿಟರ್ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಸುಮಾರು 1000 ಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡುವಂತೆ ಕೇಂದ್ರ ಸೂಚನೆ ನೀಡಿತ್ತು. ಆದರೆ 500 ಖಾತೆಗಳನ್ನು ಸ್ಥಗಿತಗೊಳಿಸಿದ ಟ್ವಿಟರ್ ಇದನ್ನು ತನ್ನ ಬ್ಲಾಗ್ ನಲ್ಲಿ ಬಹಿರಂಗಪಡಿಸಿದ್ದು, ರಾಜಕಾರಣಿಗಳು, ಪತ್ರಕರ್ತರು, ಹೋರಾಟಗಾರರ ಖಾತೆಗಳನ್ನು ಸ್ಥಗಿತಗೊಳಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಿದಂತೆ ಎಂದು ತಿರುಗಿಬಿದ್ದಿದೆ. ಇದು ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿದೆ. ಮಾತುಕತೆ ಹಂತದಲ್ಲಿರುವಾಗಲೇ ಈ ವಿಚಾರವನ್ನು ಬ್ಲಾಗ್ ನಲ್ಲಿ ಬಹಿರಂಗಪಡಿಸಿದ್ದು ಕೇಂದ್ರದ ಸಿಟ್ಟಿಗೆ ಕಾರಣವಾಗಿದೆ. ಅಲ್ಲದೆ, ನಮ್ಮ ದೇಶದ ಭದ್ರತೆಗೆ ಧಕ್ಕೆ ತರುವ ಟ್ವಿಟರ್ ಈ ದೇಶದ ಕಾನೂನಿಗೆ ಬೆಲೆಕೊಡುವುದನ್ನು ಕಲಿಯಬೇಕು ಎಂದು ಕಿಡಿ ಕಾರಿದೆ.