ನವದೆಹಲಿ : ರಾಜ್ಯದ ಅನ್ನಭಾಗ್ಯ ಯೋಜನೆಗೆ ಬೇಕಿರುವ ಅಗತ್ಯ ಅಕ್ಕಿ ಪೂರೈಸಲು ಸಾಧ್ಯವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ ಎಂದು ರಾಜ್ಯದ ಆಹಾರ ಸಚಿವ ಕೆಹೆಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರನ್ನು ಭೇಟಿ ಮಾಡಿ ಅನ್ನಭಾಗ್ಯ ಯೋಜನೆಗೆ ಅಗತ್ಯ ಅಕ್ಕಿ ಪೂರೈಕೆಗೆ ಮನವಿ ಮಾಡಿದೆ. ಆದರೆ ಅಕ್ಕಿ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆಶಾ ಭಾವನೆಯಿಂದ ಬಂದ ನಮಗೆ ಎರಡನೇ ಬಾರಿಗೆ ನಿರಾಸೆಯಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಪ್ರಮಾಣದ ಅಕ್ಕಿ ಇದೆ. ಇದರಲ್ಲಿ ಪ್ರತಿ ತಿಂಗಳು ರಾಜ್ಯಕ್ಕೆ ಅಗತ್ಯ ಇರುವ 2.29 ಲಕ್ಷ ಮೆಟ್ರಿಕ್ ಟನ್ ಕೊಡಿ ಅಂತ ಕೇಳಿದರೂ ಕೊಡುತ್ತಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎನಿಸುತ್ತಿದೆ. ಹೆಚ್ಚಿನ ಸ್ಟಾಕ್ ಇದ್ದರೂ ಯಾಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.