ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕೇಂದ್ರ ಸಚಿವರೊಬ್ಬರ ಮೇಲೆ ಗಂಭೀರವಾದ ಆರೋಪವನ್ನು ಹೊರಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಜಿ.ಬಿ ರಸ್ತೆಯಲ್ಲಿರುವ ರೆಡ್ ಲೈಟ್ ಪ್ರದೇಶ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಪಕ್ಷದ ನಾಯಕರೊಬ್ಬರಿಂದ ನಡೆಸಲ್ಪಡುತ್ತದೆ ಎಂದು ಅವರು ಹೇಳಿದ್ದಾರೆ.
ಅವರಿಬ್ಬರ ಹೆಸರೇನು ಎಂದು ಕೇಳಲಾಗಿ ಆದಷ್ಟು ಬೇಗ ಅದನ್ನು ಬಹಿರಂಗ ಪಡಿಸುವುದಾಗಿ ಅವರು ತಿಳಿಸಿದ್ದಾರೆ.
ಮಹಿಳಾ ಆಯೋಗದಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎಂಬ ಆರೋಪದ ಮೇಲೆ ಸ್ವಾತಿ ಮಲಿವಾಲ್ ವಿರುದ್ಧ ಕಳೆದೆರಡು ದಿನಗಳ ಹಿಂದೆ ದೆಹಲಿ ಸರ್ಕಾರದ ಭೃಷ್ಟಾಚಾರ ನಿಗ್ರಹ ಪಡೆ (ಎಸಿಬಿ) ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಅವರು ಈ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ತಾನು ಜಿ.ಬಿ .ರಸ್ತೆಯಲ್ಲಿರುವ ವಿವಿಧ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ಆಮ್ ಆದ್ಮಿ ಪಕ್ಷದ ನಾಯಕಿಯಾಗಿರುವ ಮಲಿವಾಲ್ ಹೇಳಿದ್ದಾರೆ.
ಸಂಸತ್ತಿನಿಂದ ಕೇವಲ ಮೂರು ಕೀಲೋಮೀಟರ್ ಅಂತರದಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯವಹಾರದ ಈ ಸೆಕ್ಸ್ ರಾಕೆಟ್‌ನ್ನು ಬಹಿರಂಗವಾಗಿ ಹೇಗೆ ನಡೆಸಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. ತನಿಖೆಯ ಸಂದರ್ಭದಲ್ಲಿ ಈ ದಂಧೆಯನ್ನು ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಪಕ್ಷದ ನಾಯಕರೊಬ್ಬರ ರಕ್ಷಣೆಯಡಿಯಲ್ಲಿ ನಡೆಸಲಾಗುತ್ತಿದೆ ಎಂಬ ಕುರಿತು ನಮಗೆ ಬಲವಾದ ಸೂಚನೆ ದೊರಕಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ