ರಾಜಕಾರಣ ಮತ್ತು ಸಿನಿಮಾ ವಿಚಾರದಲ್ಲಿ ತಮಿಳುನಾಡು ಸಂಪೂರ್ಣ ದೇಶದಲ್ಲೇ ವಿಭಿನ್ನವೆನಿಸಿದೆ. ಅಲ್ಲಿ ನಟರನ್ನು ಮತ್ತು ರಾಜಕಾರಣಿಗಳನ್ನು ಹದ್ದು ಮೀರಿ ಆರಾಧಿಸಲಾಗುತ್ತದೆ. ಅವರಿಗಾಗಿ ತಮಿಳುನಾಡು ಜನರು ಏನನ್ನು ಮಾಡಲು ಬೇಕಾದರೂ ತಯಾರಿರುತ್ತಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ಸದ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಜಯಲಲಿತಾ ಪೋಟೋ ಸರ್ಕಾರ.
ಹೌದು, ಪ್ರಜಾಪ್ರಭುತ್ವದ ಸರ್ಕಾರದಲ್ಲಿ ನೀವು ಇದನ್ನು ನೋಡುತ್ತಿರುವುದು ಇದೇ ಮೊದಲ ಬಾರಿಗಿರಬೇಕು. ತಮಿಳುನಾಡಿನಲ್ಲಿ ಜಯಾ ಫೋಟೋವನ್ನು ಮುಂದಿಟ್ಟುಕೊಂಡು ಸರ್ಕಾರ ನಡೆಸಲಾಗುತ್ತಿದೆ. ಅಮ್ಮನ ಫೋಟೋ ಎದುರುಗಡೆಯಲ್ಲಿ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತಿದೆ.
ಮುಖ್ಯಮಂತ್ರಿ ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಸರ್ಕಾರವನ್ನು ಸಂಭಾಳಿಸುತ್ತಿರುವ ತಮಿಳುನಾಡು ಹಣಕಾಸು ಸಚಿವ ಒ.ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ಬುಧವಾರ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಯಿತು.
ಕಟ್ಟಾ ಜಯಾ ಬೆಂಬಲಿಗ, ಆರಾಧಕರಾಗಿರುವ ಸೆಲ್ವಂ ಸ್ವಾಮಿನಿಷ್ಠೆ ಇಲ್ಲೂ ಮಂದುವರೆಯಿತು. ಮೇಜಿನ ಮೇಲೆ ಜಯಾ ಫೋಟೋ ಇರಿಸಿ ಅವರು ಸಭೆಯನ್ನು ನಡೆಸಿದರು.
ಕಾವೇರಿ ನದಿ ನೀರು ಹಂಚಿಕೆ ವಿವಾದ ಸೇರಿದಂತೆ ಅನೇಕ ಪ್ರಮುಖ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.
ಅನಾರೋಗ್ಯ ಪೀಡಿತರಾಗಿರುವ ಮುಖ್ಯಮಂತ್ರಿ ಜಯಲಲಿತಾ ಕಳೆದೊಂದು ತಿಂಗಳಿಂದ ಆಸ್ಪತ್ರೆಯಲ್ಲಿರುವುದರಿಂದ ಅವರು ಹೊಂದಿದ್ದ ಖಾತೆಗಳ ಹೊಣೆಗಾರಿಕೆಯನ್ನು ರಾಜ್ಯಪಾಲರು ಸೆಲ್ವಂ ಅವರಿಗೆ ಹೊರಿಸಿದ್ದಾರೆ.
ಮುಖ್ಯಮಂತ್ರಿ ಜಯಲಲಿತಾ ಅವರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಅವರು ಹೊಂದಿದ್ದ ಖಾತೆಗಳನ್ನು ಪನ್ನೀರ್‌ಸೆಲ್ವಂ ಅವರಿಗೆ ವಹಿಸಲಾಗಿದೆ. ಹಾಗೆಯೇ ಸಂಪುಟ ಸಭೆ ನಡೆಸುವ ಅಧಿಕಾರವನ್ನೂ ಅವರಿಗೆ ರಾಜ್ಯಪಾಲರು ವಹಿಸಿದ್ದಾರೆ.
ಈ ತಿಂಗಳಾಂತ್ಯಕ್ಕೆ ಈಶಾನ್ಯ ಮುಂಗಾರು ತಮಿಳುನಾಡಿಗೆ ಆಗಮಿಸುತ್ತಿದ್ದು, ಅದಕ್ಕೂ ಮೊದಲು ಸಭೆ ನಡೆಸಲಾಗಿದೆ. ಕಳೆದ ಬಾರಿಯ ಮುಂಗಾರು ಮಳೆ ಆರ್ಭಟಕ್ಕೆ ಚೆನ್ನೈ ಅಕ್ಷರಶಃ ನಲುಗಿ ಹೋಗಿತ್ತು.
ತಮಿಳುನಾಡಲ್ಲಿ 'ಜಯಾ ಫೋಟೋ' ಸರ್ಕಾರ ( ವಿಡಿಯೋ)