ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಇಂದು ರಾಜ್ಯಸಭೆಯಲ್ಲಿ ಪರೀಕ್ಷೆ ಎದುರಾಗಲಿದೆ. ಇಂದು ಸಂಸತ್ತಿನ ಮೇಲ್ಮನೆಯಲ್ಲಿ ಈ ವಿಚಾರ ಮಂಡನೆಯಾಗಲಿದೆ.
ಪಾಕಿಸ್ತಾನ, ಅಫ್ಘಾನಿಸ್ತಾನ, ಮ್ಯಾನ್ಮಾರ್, ಬಾಂಗ್ಲಾದೇಶ ಸೇರಿದಂತೆ ಬೇರೆ ದೇಶದಿಂದ ಆಶ್ರಯ ಬಯಸಿ ಬರುವ ಮುಸ್ಲಿಮೇತರ ಧರ್ಮೀಯರಿಗೆ ಭಾರತೀಯ ಪೌರತ್ವ ನೀಡುವ ಈ ವಿಧೇಯಕಕ್ಕೆ ಕಾಂಗ್ರೆಸ್ ಸೇರಿದಂತೆ ಕೆಲವು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ವಿರೋಧದ ನಡುವೆಯೂ ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ಲಭಿಸಿದೆ.
ಆದರೆ ಇಂದು ಮಧ್ಯಾಹ್ನ 2 ಗಂಟೆ ಬಳಿಕ ರಾಜ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಲಿದ್ದು, ಬಿಜೆಪಿ ಮತ್ತು ಇತರ ಪಕ್ಷಗಳ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಗುವ ಸಾಧ‍್ಯತೆಯಿದೆ. ಇದು ಧಾರ್ಮಿಕವಾಗಿ ಒಡೆದು ಆಳುವ ನೀತಿ ಎನ್ನುವುದು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಆರೋಪವಾಗಿದೆ. ಶಿವಸೇನೆ ಕೂಡಾ ಈ ವಿಚಾರದಲ್ಲಿ ಕೇಂದ್ರವನ್ನು ಬೆಂಬಲಿಸಲು ಹಿಂದೇಟು ಹಾಕಿದೆ. ಹೀಗಾಗಿ ಮೇಲ್ಮನೆಯಲ್ಲಿ ವಿದೇಯಕಕ್ಕೆ ಅಗ್ನಿಪರೀಕ್ಷೆ ಎದುರಾಗಲಿದೆ.