ಬಿಎಸ್`ಎಫ್`ನಲ್ಲಿ ಯೋಧರಿಗೆ ನೀಡಲಾಗುತ್ತಿದ್ದ ಅನಾರೋಗ್ಯಕರ ಆಹಾರ ಸೇರಿದಂತೆ ಸೇನಾ ಅಕ್ರಮಗಳ ಬಗ್ಗೆ ಫೇಸ್ಬುಕ್`ನಲ್ಲಿ ಬಟಾ ಬಯಲು ಮಾಡಿದ್ದ ಬಿಎಸ್`ಎಫ್ ಯೋಧ ತೇಜ್ ಬಹದ್ದೂರ್ ಅವರನ್ನ ಸೇನೆಯಿಂದ ಉಚ್ಚಾಟಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾದಲ್ಲಿ ಸತತ 3 ತಿಂಗಳಿನಿಂದ ನಡೆದ ಕೋರ್ಟ್ ಮಾರ್ಷಲ್ ವಿಚಾರಣೆ ಬಳಿಕ ಸಮ್ಮರಿ ಸೆಕ್ಯೂರಿಟಿ ಕೋರ್ಟ್ ಸೇವೆಯಿಂದ ವಜಾಗೊಳಿಸಿದೆ.
ಕಳಪೆ ಆಹಾರದ ವಿಡಿಯೋವನ್ನ ಫೇಸ್ಬುಕ್`ಗೆ ಅಪ್ಲೋಡ್ ಮಾಡುವ ಮೂಲಕ ತೇಜ್ ಬಹದ್ದೂರ್ ಬಿಎಸ್ಎಫ್ ಘನತೆಗೆ ಧಕ್ಕೆಯುಂಟುಮಾಡಿರುವುದು ವಿಚಾರಣೆ ವೇಳೆ ಸಾಬೀತಾಗಿದೆ ಎಂದು ಸೇನಾ ಕೋರ್ಟ್ ಹೇಳಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ತೇಜ್ ಬಹದ್ದೂರ್, ಈ ಮೊದಲು ನಿವೃತ್ತಿ ಮತ್ತು ಪೆನ್ಷನ್ ದಾಖಲೆ ಸಿದ್ಧಪಡಿಸಿಕೊಳ್ಳಲು ಹೇಳಲಾಗಿತ್ತು. ಇದೀಗ, ಏಕಾಏಕಿ ಸೇವೆಯಿಂದ ವಜಾಗೊಳಿಸಲಾಗಿದೆ. ಇದು ಪೂರ್ವ ಯೋಜಿತ ವಿಚಾರಣೆ. ಈಗ ನನಗೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವುದಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಭ್ರಷ್ಟಾಚಾರ ಬಯಲಿಗೆ ನಾನು ಮುಂದಾಗಿದ್ದೆ. ಆದರೆ, ನನ್ನ ಮಾತು ಯಾರಿಗೂ ಕೇಳಿಸಿಲ್ಲ. ಯೋಧರನ್ನ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.